ರಾಯಚೂರು: ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯೊಬ್ಬಳ ಶವ ಪತ್ತೆಯಾಗಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ. ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದ ಇಡಪನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ರಾಯಚೂರಿನ ರಿಮ್ಸ್‌ನ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬಾಲಕಿಯ ಪೊಷಕರು, ''ನಾವು ವ್ಯಾಪಾರಕ್ಕೆ ಹೋಗಿದ್ದ ವೇಳೆ ನಮ್ಮ ಮಗಳನ್ನು ಮೂವರು ಯುವಕರು ಅತ್ಯಾಚಾರ ಮಾಡಿ, ಮರಕ್ಕೆ ನೇಣು ಹಾಕಿದ್ದಾರೆ'' ಎಂದು ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲೂ ನಡೆದಿದ್ದ ಘಟನೆ: ಇತ್ತೀಚೆಗಷ್ಟೇ ಪ್ರೇಮಿಗಳಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ಡೊಂಗರಗಾಂವ್ ಗ್ರಾಮದಲ್ಲಿ ನಡೆದಿತ್ತು. ಪಾಂಡುರಂಗ್ ಕಿಣ್ಣಿ(20) ಹಾಗೂ ಮೃತರನ್ನು ಅಕ್ಷತಾ ಭರಣಿ (19) ಎಂದು ಗುರುತಿಸಲಾಗಿತ್ತು. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರು ಪ್ರೇಮಿಗಳ ಶವಗಳು ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕುಟುಂಬಸ್ಥರ ವಿರೋಧದಿಂದ ಸಾವಿಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದರು.
ಮಂಡ್ಯದ ಕೆಲದಿನಗಳ ಹಿಂದಿನ ಘಟನೆಯಲ್ಲಿ ಖ್ಯಾತ ವೈದ್ಯ ಡಾ.ವೇಣುಗೋಪಾಲ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ಘಟನೆ ನಡೆದಿತ್ತು. ಮಂಡ್ಯದ ಉಮ್ಮಡಹಳ್ಳಿ ಗೇಟ್ ಸಮೀಪದ ಸಾಂಜೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಘಟನೆಗೂ ಮುನ್ನಾ ಡಾ.ವೇಣುಗೋಪಾಲ್ ಎಂದಿನಂತೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಹಲವು ಮಂದಿಗೆ ಚಿಕಿತ್ಸೆ ನೀಡಿದ್ದರು.
ಮಧ್ಯಾಹ್ನ 3-4 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ಹೊರಟು ಮದ್ದೂರು ಸಾರಿಗೆ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಸ್ಥಳೀಯರು ಕೃಷಿ ಚಟುವಟಿಕೆಗೆಂದು ಬೆಳಗ್ಗೆ ತೆರಳಿದ್ದ ವೇಳೆ ವೇಣುಗೋಪಾಲ್ ಮೃತದೇಹ ಕೆರೆಯ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೂಡಲೇ ಜನರು ಮದ್ದೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಸಹೋದರಿಯ ಸಾವಿನಿಂದ ಮನನೊಂದು ವೇಣುಗೋಪಾಲ್ ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಗ್ರಾಮಸ್ಥರು ಹೇಳಿದ್ದರು.
ಇದನ್ನೂ ಓದಿ: ಐದು ವರ್ಷದ ಮಗಳ ಕೊಂದು ಸಾವಿಗೆ ಶರಣಾದ ದಂಪತಿ