ರಾಯಚೂರು: ಕೊರೊನಾ ಸೋಂಕು ನಿಯಂತ್ರಿಸಲು ರಾಯಚೂರು ಜಿಲ್ಲೆಯಾದ್ಯಂತ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ವ್ಯಾಪಾಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಮ್ಮ ಪ್ರದತ್ತವಾದ ಅಧಿಕಾರವನ್ನ ಬಳಸಿ 1973ರ ಪ್ರಕ್ರಿಯೆ ಸಂಹಿತೆ ಕಲಂ 144ರನ್ವಯ 2021 ಏಪ್ರಿಲ್ 21ರಿಂದ ಮೇ 4ರವರೆಗೆ ಷರತ್ತುಗಳನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಹಾಗೂ 4 ಜನಕ್ಕಿಂತ ಹೆಚ್ಚು ಜನರು ಅನಗತ್ಯವಾಗಿ ಗುಂಪು ಸೇರುವುದು, ಓಡಾಡುವುದನ್ನ ನಿರ್ಬಂಧಿಸಲಾಗಿದೆ. ಮದುವೆ, ಜನ್ಮದಿನ, ಶವ ಸಂಸ್ಕಾರ ಹಾಗೂ ಇತರೆ ಸಮಾರಂಭಗಳಲ್ಲಿ (ಗರಿಷ್ಠ ಸಂಖ್ಯೆಯನ್ನ ಮಿತಿಗೊಳಿಸಿ) ಸರ್ಕಾರದ ಆದೇಶದ ಅನ್ವಯ ಅವಕಾಶ ಕಲ್ಪಿಸಲಾಗಿದೆ ಎಂದರು.
ಸಾರ್ವಜನಿಕ ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ತಹಶೀಲ್ದಾರರ ಪೂರ್ವಾನುಮತಿ ಪಡೆಯಬೇಕು. ಅನುಮತಿ ಇಲ್ಲದೆ ಕಾರ್ಯಕ್ರಮಗಳನ್ನ ನಡೆಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಶೇ. 50ರಷ್ಟು ಸರ್ಕಾರಿ, ಖಾಸಗಿ ಬಸ್ಗಳು, ಟ್ಯಾಕ್ಸಿ ವಾಹನಗಳು (ಕ್ಯಾಬ್ ಒಳಗೊಂಡಂತೆ) ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸರಕು ಸಾಮಾಗ್ರಿಗಳ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.