ರಾಯಚೂರು: ಕೊರೊನಾ ಸೋಂಕು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದೆ. ನಾನಾ ಮೂಲಗಳಿಂದ ಸರ್ಕಾರಕ್ಕೆ ಬರುವ ರಾಜಧನಕ್ಕೆ ಕತ್ತರಿ ಬಿದ್ದಿದೆ. ಆದ್ರೆ ಕೊರೊನಾ ಲಾಕ್‌ಡೌನ್, ಅಕ್ರಮ ಮರಳುಗಾರಿಕೆ ಆರೋಪದ ನಡುವೆ ಸಕ್ರಮ ಮರಳುಗಾರಿಕೆಯಿಂದ ಒಂದೇ ತಿಂಗಳಲ್ಲಿ ಬರೊಬ್ಬರಿ 10 ಕೋಟಿ ರಾಜಧನ ಸಂಗ್ರಹವಾಗಿದೆ.
ಮರಳುಗಾರಿಕೆಯಿಂದ ಒಂದೇ ತಿಂಗಳಲ್ಲಿ 10 ಕೋಟಿ ರೂಪಾಯಿ ರಾಜಧನ ಸಂಗ್ರಹ..! ರಾಜ್ಯದಲ್ಲಿ ಹರಿಯುವ ನದಿಗಳಿಂದ ಮರಳುಗಾರಿಕೆ ನಡೆಸಲು ರಾಜ್ಯ ಸರ್ಕಾರ ನೀಡುವ ಅನುಮತಿಯಿಂದ ಪ್ರತಿ ವರ್ಷ ಬೊಕ್ಕಸ ಕೋಟ್ಯಂತರ ರೂಪಾಯಿ ರಾಜಧನ ಸಂಗ್ರಹವಾಗುತ್ತದೆ. ಕಳೆದ ವರ್ಷ ಕೂಡ ಸಕ್ರಮ ಮರಳುಗಾರಿಕೆಯಿಂದ ರಾಜಧನ ಸಂಗ್ರಹಕ್ಕೆ ಸಮಸ್ಯೆಯಾಗಿಲ್ಲ. ಆದ್ರೆ ಪ್ರಸಕ್ತ ವರ್ಷದಲ್ಲಿ ಕೊರೊನಾ ಲಾಕ್ಡೌನ್ನಿಂದ ಆರಂಭದ ದಿನಗಳಲ್ಲಿ ಮರಳುಗಾರಿಕೆಯನ್ನು ನಿಲ್ಲಿಸಲಾಯಿತು. ಹಲವು ವಲಯಗಳಿಂದ ರಾಜಧನಕ್ಕೆ ಕತ್ತರಿ ಬಿದ್ದಿರುವ ನಡುವೆ, ಮರಳುಗಾರಿಕೆಯಿಂದ ಸರ್ಕಾರಕ್ಕೆ ಬರುವ ಆದಾಯಕ್ಕೆ ಕತ್ತರಿ ಬಿತ್ತು. ಆದರೆ, ಎರಡು ನದಿಗಳು ಹರಿಯುವ ರಾಯಚೂರು ಜಿಲ್ಲೆಯಿಂದ ಕಳೆದ ವರ್ಷ ಸಂಗ್ರಹವಾಗಿದ್ದ ರಾಜಧನಕ್ಕಿಂತ, ಅರ್ಧಪಟ್ಟು ರಾಜಧನ ಒಂದೇ ತಿಂಗಳಿನಲ್ಲಿ ಸಂಗ್ರಹವಾಗಿದ್ದು, ರಾಜ್ಯದ ಖಜಾನೆಯನ್ನು ಆರ್ಥಿಕವಾಗಿ ಬಲಪಡಿಸಿದೆ.
ರಾಯಚೂರು ಜಿಲ್ಲೆಯ ಬಲ ಭಾಗದಲ್ಲಿ ಕೃಷ್ಣ ನದಿ 183.7 ಕಿ.ಮೀ, ತುಂಗಭದ್ರಾ ನದಿ 100.6 ಕಿ.ಮೀ ಜಿಲ್ಲೆಯ ವ್ಯಾಪ್ತಿಗೆ ಬರುತ್ತಿದೆ. ಈ ಎರಡು ನದಿಗಳಿಂದ ಜಿಲ್ಲೆಯಲ್ಲಿ ಯಥೇಚ್ಛವಾಗಿ ಮರಳು ದೊರೆಯುತ್ತದೆ. ಈ ಮರಳನ್ನ ತೆಗೆಯಲು ಒಟ್ಟು 38 ಬ್ಲಾಕ್ ಗಳನ್ನ ಗುರುತಿಸಲಾಗಿದೆ. ಇದರಲ್ಲಿ 27 ಮರಳಿನ ಬ್ಲಾಕ್ ಕಾರ್ಯ ನಿರ್ವಹಣೆ ಮಾಡಲಿವೆ. ಈ 27 ಬ್ಲಾಕ್ ಗಳಿಂದ 2019-2020ನೇ ಸಾಲಿನಲ್ಲಿ 2,81,432 ಮೆಟ್ರಿಕ್ ಟನ್ ಮರಳು ತೆಗೆಯುವ ಮೂಲಕ ಒಟ್ಟು 22,58,31,617(22ಕೋಟಿ) ರೂಪಾಯಿ ರಾಜಧನ ಸಂಗ್ರಹಿಸಲಾಯಿತು.
ಆದ್ರೆ ಪ್ರಸಕ್ತ 2020-2021ನೇ ಸಾಲಿನಲ್ಲಿ 1,31,851 ಮೆಟ್ರಿಕ್ ಟನ್ ಮರಳು ತೆಗೆಯುವ ಮೂಲಕ ಬರೋಬ್ಬರಿ 10,97,91,047 ರೂ ರಾಜಧನ ಸಂಗ್ರಹಿಸಲಾಗಿದೆ. ಇದರಲ್ಲಿ ಏಪ್ರಿಲ್, ಮೇ, ತಿಂಗಳಲ್ಲಿ ಲಾಕ್ ಡೌನ್ ಇರುವ ಕಾರಣ ಮರಳುಗಾರಿಕೆಯನ್ನ ಸ್ಥಗಿತಗೊಳಿಸಲಾಗಿತ್ತು. ಜೂನ್ ತಿಂಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಿದ ತಿಂಗಳಲ್ಲಿ ಬರೊಬ್ಬರಿ 10 ಕೋಟಿಗೂ ಅಧಿಕ ಮರಳಿನ ರಾಜಧನ ರಾಜ್ಯ ಖಜಾನೆ ಸೇರಿದೆ.
ಇನ್ನು ಜಿಲ್ಲೆಯಲ್ಲಿ ಹೇರಳವಾಗಿ ಮರಳು ಸಿಗುವುದರಿಂದ ಸಕ್ರಮವಾಗಿ ಎಷ್ಟು ಮರಳುಗಾರಿಕೆ ನಡೆಯುತ್ತಿದೆಯೋ ಅಷ್ಟೇ ಯಥೇಚ್ಛವಾಗ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಗಂಭೀರ ಆರೋಪಿವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನ ಹರಿದು ಬಿಡಲಾಗುತ್ತದೆ. ಅಲ್ಲದೇ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ 51 ಅಕ್ರಮ ಮರಳುಗಾರಿಕೆ ಪ್ರಕರಣಗಳು ಸಹ ದಾಖಲಾಗಿವೆ. ಸಕ್ರಮದಿಂದ ಒಂದೇ ತಿಂಗಳಲ್ಲಿ ಮರಳುಗಾರಿಕೆಯಿಂದ ಕೋಟ್ಯಂತರ ರೂ. ರಾಜಧನ ಸಂಗ್ರಹವಾಗಿದ್ದು, ಅಕ್ರಮ ಮರಳುಗಾರಿಕೆ ಸಂಪೂರ್ಣವಾಗಿ ತಡೆದದ್ದೇ ಆದಲ್ಲಿ ಇದಕ್ಕಿಂತ ದುಪ್ಪಟ್ಟು ಹಣ ರಾಜ್ಯದ ಖಜಾನೆ ಸೇರಲಿದೆ.
ಒಟ್ಟಿನಲ್ಲಿ ಕೊರೊನಾ ಲಾಕ್‌ಡೌನ್, ಅಕ್ರಮ ಮರಳುಗಾರಿಕೆ ಆರೋಪದ ನಡುವೆ ರಾಯಚೂರು ಜಿಲ್ಲೆಯ ಒಂದೇ ತಿಂಗಳಲ್ಲಿ 10 ಕೋಟಿ ರೂ.ಮರಳುನಿಂದ ರಾಜಧನ ಸಂಗ್ರಹಿಸುವ ಮೂಲಕ, ಮರಳಿನಿಂದ ಅತಿಹೆಚ್ಚು ರಾಜಧನ ಪಾವತಿ ಮಾಡಿರುವ ರಾಜ್ಯದ ಜಿಲ್ಲೆಗಳ ಟಾಪ್ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಮುಂಬರುವ ದಿನಗಳಲ್ಲಿ ಅಕ್ರಮ ಮರಳುಗಾರಿಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದಲ್ಲಿ ಇನ್ನು ಹೆಚ್ಚು ರಾಜಧನ ಕ್ರೋಢಿಕಾರಣವಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾನವಂತರ ಒತ್ತಾಸೆಯಾಗಿದೆ.