ಮೈಸೂರು: ಮದುವೆಗೆ ಮೂರು ದಿನ ಬಾಕಿ ಇರುವಾಗಲೇ ಮದುಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ಸರಗೂರು ತಾಲೂಕಿನ ತೆರಣಿಮುಂಟಿ ಗ್ರಾಮದ ನಾಗರಾಜು ಎಂಬುವವರ ಪುತ್ರ ಲೋಕೇಶ್ (30) ಮೃತ ದುರ್ದೈವಿ. ಈ ಘಟನೆಯಲ್ಲಿ ಶಂಕರ (30) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ನೇಹಿತನ ಜೊತೆ ಬೈಕ್ನಲ್ಲಿ ಮೈಸೂರಿಗೆ ತೆರಳಿ ಮದುವೆ ಬಟ್ಟೆ ಖರೀದಿಸಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಪುರ ಗ್ರಾಮದ ಕೆರೆ ತಿರುವಿನಲ್ಲಿ ಟಾಟಾ ಏಸ್ ಗೂಡ್ಸ್ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಸವಾರರಿಬ್ಬರು ರಸ್ತೆಗೆ ಬಿದ್ದು, ಲೋಕೇಶ್ ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ಬಳಿಕ ಅವರು ಸ್ಥಳದಲ್ಲಿಯೇ ಮೃತಪಟ್ಟರು.
ಸ್ಥಳಕ್ಕೆ ಹೆಚ್.ಡಿ.ಕೋಟೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಲಾರಿ- ಜೀಪ್ ನಡುವೆ ಭೀಕರ ಅಪಘಾತ, 7 ಸಾವು, ಐವರು ಗಂಭೀರ