ಮೈಸೂರು: ನವರಾತ್ರಿಯ ಕೊನೆಯ ದಿನ ಅರಮನೆಯಲ್ಲಿ ವಿಜಯ ದಶಮಿಯ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ರಾಜ ವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನೆರವೇರಿಸಿದರು. ನವರಾತ್ರಿಯ ಕೊನೆಯ ದಿನವಾದ ಇಂದು ಅರಮನೆಯಲ್ಲಿ ವಿಜಯ ದಶಮಿಯ ಧಾರ್ಮಿಕ ಕೈಂಕರ್ಯಗಳು ಬೆಳಗ್ಗಿನಿಂದಲೇ ಆರಂಭಗೊಂಡವು.
ಬೆಳಗ್ಗೆ 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮಿಸಿದವು. ಬಳಿಕ ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿಂದ ಸವಾರಿ ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗ ವೀಕ್ಷಣೆ ಮಾಡಿದ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಚಿನ್ನ ಲೇಪಿತ ಪಲ್ಲಕ್ಕಿಯಲ್ಲಿ ಖಾಸಾ ಆಯುಧಗಳನ್ನು ಇಟ್ಟು 11 ರಿಂದ 11:40ರ ಶುಭ ಲಗ್ನದಲ್ಲಿ ಅರಮನೆಯಿಂದ ಭುವನೇಶ್ವರಿ ದೇವಾಲಯದವರೆಗೆ ವಿಜಯ ದಶಮಿ ಮೆರವಣಿಗೆ ಮೂಲಕ ಅಲ್ಲಿಗೆ ಸಾಗಿ ಶಮಿ ಪೂಜೆ ನೆರವೇರಿಸಿದರು.
ಪೂಜೆ ಬಳಿಕ ಅರಮನೆಗೆ ರಾಜವಂಶಸ್ಥರು ವಾಪಸ್ ಆದರು. ಈ ಮೂಲಕ ನವರಾತ್ರಿಯ 10 ದಿನಗಳ ಕಾಲ ನಡೆದ ಧಾರ್ಮಿಕ ಕೈಂಕರ್ಯಗಳು ಇಂದಿಗೆ ಕೊನೆಗೊಂಡವು. ಸಂಜೆ ಜಂಬೂಸವಾರಿ ಮೆರವಣಿಗೆ ನಡಯಲಿದೆ. ಗಣ್ಯರೊಂದಿಗೆ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಜಂಬೂಸವಾರಿಯ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಿಗಿ ಭದ್ರತೆ: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. 6,000ಕ್ಕೂ ಹೆಚ್ಚಿನ ಪೊಲೀಸರನ್ನು ಜಂಬೂ ಸವಾರಿ ಮಾರ್ಗದಲ್ಲಿ ನಿಯೋಜನೆ ಮಾಡಲಾಗಿದೆ. ಇದರಲ್ಲಿ ಒಬ್ಬರು ಡಿಐಜಿ, 8 ಜನ ಎಸ್ಪಿ, 10 ಜನ ಅಡಿಷನಲ್ ಎಸ್ಪಿಗಳು ಸಿಟಿವಿ ಕ್ಯಾಮರಾಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು ಸೇರಿದಂತೆ ಭಾರಿ ಬಂದೋಬಸ್ತ್ ಮಾಡಲಾಗಿದೆ. ಬಾಂಬ್ ಪತ್ತೆ ಹಾಗೂ ನಿಗ್ರಹದಳ, ಶ್ವಾನದಳ ಸೇರಿದಂತೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ: ಸಂಜೆ 4.40 ರಿಂದ 5 ವರೆಗೆ ಸಲ್ಲುವ ಶುಭ ಮೀನ ಮುಹೂರ್ತದಲ್ಲಿ ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ರಾಜಪಥದಲ್ಲಿ ಸುಮಾರು 5 ಕಿ.ಮೀ ದೂರದ ವರೆಗೆ ಈ ಮೆರವಣಿಗೆ ಸಾಗಲಿದೆ. ನಂತರ ಬನ್ನಿಮಂಟಪದಲ್ಲಿ ಮೆರವಣಿಗೆ ಕೊನೆಗೊಳ್ಳಲಿದೆ. ಮೆರವಣಿಗೆ ಸಾಗುವ ವೇಳೆ ನಾಡಿನ ಕಲೆ, ಸಂಸ್ಕೃತಿ, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ.
ಇದನ್ನೂ ಓದಿ: ಇಂದು ದಸರಾ ಜಂಬೂ ಸವಾರಿ ವೈಭವ: ಅಂಬಾರಿ ಹೊರಡುವ ಮಾರ್ಗದಲ್ಲಿ ಭಾರಿ ಭದ್ರತೆ