ಮೈಸೂರು: ಇತ್ತಿಚೆಗೆ ಪ್ರತಿದಿನ ಗ್ರಾಮಗಳಲ್ಲಿ ಹಾಗೂ ನಗರಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಕಾಡಲ್ಲಿರಬೇಕಾದ ಚಿರತೆಗಳು ನಾಡಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣವೇನು, ಈ ಸಮಸ್ಯೆಗೆ ಪರಿಹಾರವೇನು ಎಂಬ ಬಗ್ಗೆ ವನ್ಯಜೀವಿ ತಜ್ಞೆ ಡಾ.ಕೆ.ಮೆಕಾಲ ಕಾಗ್ಲಿ ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಚಿರತೆಗಳು ಗ್ರಾಮ ಹಾಗೂ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ, ಆಗಿಂದಾಗ್ಗೆ ಬಂದು, ಹೋಗುತ್ತಿರುತ್ತವೆ. ಈ ಬಗ್ಗೆ ಹಿಂದೆ ಯಾವುದೇ ರೀತಿಯ ಲೆಕ್ಕಗಳು ಇರಲಿಲ್ಲ. ಆದರೆ ಇತ್ತೀಚೆಗೆ ನಗರೀಕರಣ ಹೆಸರಿನಲ್ಲಿ ಹಳ್ಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಮಧ್ಯೆ ಸಂಪರ್ಕ ಬೆಳೆಸಲಾಗುತ್ತಿದೆ. ಇದರಿಂದ ಕಟ್ಟಡಗಳು, ರಸ್ತೆಗಳು ನಿರ್ಮಾಣವಾಗುತ್ತಿವೆ. ಹೀಗಾಗಿ ಕಾಡು ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ.
ಮನುಷ್ಯನಿಗಿಂತ 5 ಪಟ್ಟು ಹೆಚ್ಚು ವಾಸನೆ ಗ್ರಹಿಸುವ ಶಕ್ತಿ ಚಿರತೆಗಿದೆ: ಚಿರತೆಗಳು ರಾತ್ರಿ ಮಾತ್ರ ಆಚೆ ಬರುವ ನಿಶಾಚರಿಗಳು. ಮನುಷ್ಯನಿಗಿಂತ 7 ಪಟ್ಟು ದೃಷ್ಟಿಯ ನಿಖರತೆ ಹೊಂದಿರುವ ಚಿರತೆಗಳು, 5 ಪಟ್ಟು ಹೆಚ್ಚಾಗಿ ವಾಸನೆ ಗ್ರಹಿಸುತ್ತವೆ. ಜೊತೆಗೆ ಮಾನವನ ಸಂಪರ್ಕ ಮಾಡದೇ, ಮರದ ಮೇಲೆ, ಪಾಳು ಮನೆ, ಕಬ್ಬಿನ ಗದ್ದೆಗಳಲ್ಲಿ ಹೆಚ್ಚಾಗಿ ವಾಸಮಾಡುವ ಚಿರತೆಗಳು, ಹಳ್ಳಿಯ ಕಡೆ ಆಹಾರ ಅರಸಿ ರಾತ್ರಿಯ ಸಂದರ್ಭದಲ್ಲಿ ಬಂದು ನಾಯಿಗಳನ್ನು ಹಿಡಿದುಕೊಂಡು ಹೋಗುತ್ತವೆ. ಆದರೆ, ಎಂದೂ ಸಹ ಮನುಷ್ಯನಿಗೆ ತೊಂದರೆ ಕೊಡುವುದಿಲ್ಲ. ಹಾಗೂ ಚಿರತೆ ಮನುಷ್ಯ ಭಕ್ಷಿ ಅಲ್ಲ, ಮನುಷ್ಯ ತೊಂದರೆ ಕೊಡದಿದ್ದರೆ ಚಿರತೆಗಳು ಅವನಿಗೆ ತೊಂದರೆ ಕೊಡುವುದಿಲ್ಲ. ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತವೆ. ಒಂದು ಚಿರತೆಗೆ ಒಂದು ಬಾರಿ ಎರಡರಿಂದ ಮೂರು ಕೆಜಿ ಮಾಂಸ ಮಾತ್ರ ಬೇಕು. ಗಾಬರಿಯಾದಾಗ ಮಾತ್ರ ಅನಿವಾರ್ಯವಾಗಿ ಮನುಷ್ಯನ ಮೇಲೆ ಬೀಳುತ್ತವೆ ಎಂದು ಚಿರತೆ ಹಾಗೂ ಮಾನವನ ನಡುವಿನ ಸಂಘರ್ಷದ ಬಗ್ಗೆ ತಜ್ಞರು ವಿವರಿಸಿದ್ದಾರೆ.
ಹೆಚ್ಚಾದ ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ: ಬೆಂಗಳೂರು ಹೊರ ವಲಯದಲ್ಲಿ ಬುಧವಾರ ಚಿರತೆ ಮೇಲೆ ಶೂಟೌಟ್ ಮಾಡಲಾಗಿದ್ದು, ಅದು ತುಂಬಾ ಸೆನ್ಸಿಟಿವ್ ವಿಷಯ. ಅವರು ಐದಾರು ದಿನಗಳ ಕಾಲ ಚಿರತೆಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಚಿರತೆ ಬುಧವಾರ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ದಾಳಿ ಮಾಡಿದೆ. ಆಗ ಮನುಷ್ಯ ತನ್ನ ರಕ್ಷಣೆಗಾಗಿ ಪ್ರಯತ್ನ ಮಾಡಿದ್ದಾನೆ. ಆಗ ಈ ಘಟನೆ ನಡೆದಿದೆ. ಕೆಲವೊಂದು ಬಾರಿ ಬೇರೆ ದಾರಿಯೇ ಇಲ್ಲದ ಪರಿಸ್ಥಿತಿಯಲ್ಲಿ ಈ ರೀತಿ ಮಾಡಲೇಬೇಕಾಗುತ್ತದೆ ಎಂದು ಬುಧವಾರ ಬೆಂಗಳೂರಿನಲ್ಲಿ ನಡೆದ ಚಿರತೆ ಮೇಲಿನ ಶೂಟೌಟ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನಗರದ ಒಳಗೆ ಬರುತ್ತಿರುವ ಚಿರತೆಗಳು ಕಾಡು ಚಿರತೆಗಳಲ್ಲ, ಅವು ನಾಡಿನಲ್ಲೇ ಹೊಲ, ಕಬ್ಬಿನ ಗದ್ದೆಗಳಲ್ಲಿ, ಬೆಟ್ಟಗಳಲ್ಲಿ ಇರುತ್ತವೆ. ಆದರೆ, ಅವುಗಳ ವಾಸಸ್ಥಾನದಲ್ಲಿ ನಗರೀಕರಣ ಆಗುತ್ತಿದ್ದು, ಆಹಾರ ಅರಸಿ ಬಂದಾಗ ಈ ರೀತಿಯ ಘಟನೆಗಳು ನಡೆಯುತ್ತಿದೆ. ಚಿರತೆಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿನ ಪ್ರದೇಶಗಳಿಗೆ ಬಿಡಬೇಕು. ಚಿರತೆ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಇರುವ ನಾಯಿ, ಕಾಡುಹಂದಿ, ಮುಳ್ಳು ಹಂದಿ ತರಹದ ಪ್ರಾಣಿಗಳನ್ನು ಆಹಾರಕ್ಕಾಗಿ ಹುಡುಕಿಕೊಂಡು ಬರುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಬೇಕು. ವಿನಾ ಕಾರಣ ಮನುಷ್ಯರ ಮೇಲೆ ದಾಳಿ ಮಾಡದ ಚಿರತೆಗಳನ್ನು ನಾವು ಸಹ ಬದುಕಲು ಬಿಡಬೇಕು ಎಂದು ಚಿರತೆ ಮತ್ತು ಮಾನವನ ನಡುವಿನ ಸಂಘರ್ಷದ ಬಗ್ಗೆ ವನ್ಯಜೀವಿ ತಜ್ಞೆ ಡಾ. ಮೆಕಾಲ ಕಾಗ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಅರಣ್ಯ ಸಿಬ್ಬಂದಿ ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ ಕೊನೆಗೂ ಸೆರೆ