ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವನ್ಯಜೀವಿ ವಲಯದ ಮಂಟಳ್ಳಿ ಶಾಖೆಯ ಸೊಳ್ಳೇಪುರ ಗ್ರಾಮ ಸಮೀಪದ ಕಾಡಂಚಿನ ಜಮೀನುಗಳಲ್ಲಿ ಬೆಳೆಹಾನಿ ಮಾಡುತ್ತಿದ್ದ ಒಂಟಿ ಸಲಗವನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಸಪ್ತ ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ರವಾನಿಸಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ವನ್ಯಜೀವಿ ವಲಯದ ಮಂಟಳ್ಳಿ ಶಾಖೆಯ ಗಡಿಭಾಗದ ರೈಲ್ವೆ ಬ್ಯಾರಿಕೇಡ್ ಹಾಗೂ ಸ್ಟೀಲ್ ರೋಫ್ ಬ್ಯಾರಿಕೇಡ್ ಅನ್ನೇ ಮುರಿದು ಹೊರಬಂದು ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆ ಬೆಳೆ ನಾಶಪಡಿಸುತ್ತಿತ್ತು. ಇದು ಜನರಲ್ಲಿ ಭೀತಿ ಸೃಷ್ಟಿಸಿತ್ತು. ಈ ಆನೆ ಉಪಟಳದ ಬಗ್ಗೆ ಹಲವು ವರ್ಷಗಳಿಂದಲೂ ಕಾಡಂಚಿನ ರೈತರು ದೂರು ನೀಡುತ್ತಲೇ ಇದ್ದರು. ಆನೆ ಹೊರ ಬಂದಾಗ ಕಾಡಿಗಟ್ಟುವ ಕೆಲಸವಾಗುತ್ತಿತ್ತು, ಆದ್ರೆ ಕೆಲ ದಿನಗಳ ಬಳಿ ಮತ್ತೆ ಹೊರಬಂದು ದಾಳಿ ಮಾಡುತ್ತಿತ್ತು.
ಜಾರ್‌ಗಲ್ ಬಳಿ ಸೆರೆ: ವೀರನಹೊಸಹಳ್ಳಿಯ ಮಂಟಳ್ಳಿ ಶಾಖೆಯ ಜಾರ್‌ಗಲ್ ಬೀಟ್ ಅರಣ್ಯ ಪ್ರದೇಶದಲ್ಲಿ ಅಡ್ಡಾಡುತ್ತಾ, ರೋಪ್ ಬ್ಯಾರಿಕೇಡ್‌ನಿಂದ ಹೊರದಾಟುವ ವೇಳೆಯೇ ಅರವಳಿಕೆ ಚುಚ್ಚು ಮದ್ದು ನೀಡಿ ಈ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಈ ಭಾಗದಲ್ಲಿ ಮತ್ತೆರಡು ಪುಂಡಾನೆಗಳಿದ್ದು, ಅವನ್ನು ಸಹ ಸೆರೆ ಹಿಡಿಯಲಾಗುವುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೆಡೆಮುರಿ ಕಟ್ಟಿದ ಕ್ಯಾಪ್ಟನ್ ಅಭಿಮನ್ಯು: ಸೆರೆಯಾಗಿರುವ ಒಂಟಿ ಸಲಗವು ಸುಮಾರು 35-40 ವರ್ಷ ವಯಸ್ಸಿನ ಬಲಿಷ್ಠ ಆನೆಯಾಗಿದೆ. ಅರವಳಿಕೆ ಚುಚ್ಚುಮದ್ದಿನಿಂದ ಜ್ಞಾನ ತಪ್ಪಿದ್ದ ಪುಂಡಾನೆ ಎಚ್ಚರಗೊಂಡು ತನ್ನ ಪ್ರತಾಪ ತೋರಲು ಮುಂದಾಗುತ್ತಿದ್ದಂತೆ ಅಭಿಮನ್ಯು ನೇತೃತ್ವದ ಆನೆಗಳು ಕಾರ್ಯಾಚರಣೆ ನಡೆಸಿದವು. ಲಾರಿ ಹತ್ತಲು ನಿರಾಕರಿಸುತ್ತಿದ್ದ ಪುಂಡಾನೆಯನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಬಲಭೀಮ, ಮಹೇಂದ್ರ, ಮಹಾರಾಷ್ಟ್ರ ಭೀಮ್, ಅಶ್ವತ್ಥಾಮ, ಹರ್ಷ ಸಾಕಾನೆಗಳು ಎಳೆದು ತಂದು ಲಾರಿ ಹತ್ತಿಸಿದವು.
ನಾಗರಹೊಳೆ ಉದ್ಯಾನದ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ್, ವೀರನಹೊಸಹಳ್ಳಿ ಆರ್ಎಫ್ಓ ಅಭಿಷೇಕ್.ಪಿ.ಎಸ್, ನಾಗರಹೊಳೆ ಪಶುವೈದ್ಯಾಧಿಕಾರಿ ಡಾ.ರಮೇಶ್, ಡಿಆರ್‌ಎಫ್‌ಓ ಚಂದ್ರೇಶ್, ದುಬಾರೆ ಸಾಕಾನೆ ಶಿಬಿರದ ಡಿಆರ್‌ಎಫ್‌ಓ ರಂಜನ್ ಸೇರಿದಂತೆ 70ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದ ಮೇರೆಗೆ ಈ ಆನೆಯನ್ನು ಸೆರೆ ಹಿಡಿಯಲಾಗಿದೆ.
ಸಿಡಿಲು ಬಡಿದು ಹಸುಗಳು ಸಾವು: ಸಿಡಿಲು ಬಡಿದು ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರೈತ ಯೋಗೇಶ್ ಎಂಬವರಿಗೆ ಸೇರಿದ ಎರಡು ಇಲಾತಿ ಹಸುಗಳನ್ನು ಮನೆ ಮುಂಭಾಗದ ಅರಳಿ ಮರದ ಕೆಳಗಡೆ ಕಟ್ಟಿಹಾಕಿದ್ದು, ಶನಿವಾರ ರಾತ್ರಿ 9 ಗಂಟೆಯ ವೇಳೆಗೆ ಸಿಡಿಲು ಬಡಿದಿದೆ.
ರೈತ ಕುಟುಂಬಕ್ಕೆ ಆಸರೆಯಾಗಿದ್ದ ಹಸುಗಳು ಸುಮಾರು 2 ಲಕ್ಷ ರೂ. ಬೆಲೆ ಬಾಳುತ್ತಿದ್ದವು. ಹಸುಗಳ ಸಾವಿನಿಂದ ರೈತ ಕುಟುಂಬ ಕಂಗಾಲಾಗಿದ್ದಾನೆ. ಸ್ಥಳಕ್ಕೆ ತಹಶೀಲ್ದಾರ್ ಸಣ್ಣರಾಮಪ್ಪ, ಕಂದಾಯ ನಿರೀಕ್ಷಕ ಯೋಗೇಂದ್ರ ಕುಮಾರ್, ಗ್ರಾಮ ಲೆಕ್ಕಿಗ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇದನ್ನೂ ಓದಿ: ಕೊಡಗು: ಅರಣ್ಯ ಇಲಾಖೆ ಸಿಬ್ಬಂದಿ ಬಲಿ ಪಡೆದಿದ್ದ ಕಾಡಾನೆ ಸೆರೆ