ನಿರ್ಮಲಾ ಸೀತಾರಾಮನ್ ಬಜೆಟ್ ಮೇಲೆ ಮೈಸೂರಿಗರ ಬೆಟ್ಟದಷ್ಟು ನಿರೀಕ್ಷೆ - ಕೇಂದ್ರದ ಬಜೆಟ್ ಮೇಲೆ ಮೈಸೂರಿನ ಜನರ ಕುತೂಹಲ
ಕೇಂದ್ರ ಬಜೆಟ್ ಮೇಲೆ ಮೈಸೂರಿನ ಜನರು ಕೂಡ ಸಾಕಷ್ಟು ಕುತೂಹಲದಿಂದ ಕಾದು ನೋಡುತ್ತಿದ್ದಾರೆ. ಯಾವೆಲ್ಲಾ ಪ್ಯಾಕೇಜ್ಗಳನ್ನು ಸಾಂಸ್ಕೃತಿಕ ನಗರಿಗೆ ಸಿಗಲಿದೆ ಎಂದು ಈ ಭಾಗದ ಜನರು ಕಾದು ನೋಡುತ್ತಿದ್ದಾರೆ.
ಬಜೆಟ್ನಲ್ಲಿ ಮೈಸೂರಿಗರ ನಿರೀಕ್ಷೆ
ಮೈಸೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿಗೆ ಮಂಡಿಸಲಿರುವ ಬಜೆಟ್ ಮೇಲೆ ದೇಶಾದ್ಯಂತ ಭಾರಿ ನಿರೀಕ್ಷೆಯಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಡುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಸಾರ್ವಜನಿಕರಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ಸಾಮಾನ್ಯರಿಗೆ ಉತ್ತಮ ಬಜೆಟ್ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಯಾವ ಕೊಡುಗೆ ನೀಡಲಿದ್ದಾರೆ. ನೆರೆಪೀಡಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ಕೊಡುವರಾ? ಕೃಷಿ, ಕೈಗಾರಿಕಾ ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಕ್ಷೇತ್ರಗಳ ಮೇಲೆ ನಿರ್ಮಲಾ ಸೀತಾರಾಮನ್ ಅವರ ದೃಷ್ಟಿಕೋನ ಹೇಗಿದೆ? ಸಾಂಸ್ಕೃತಿಕ ನಗರಿ ಮೈಸೂರಿಗೆ ಕೂಡ ವಿಶೇಷ ಕಾರ್ಯಯೋಜನೆಗಳು ಬರಲಿವೆಯಾ ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ರೈತರು. ಮೈಸೂರಿನ ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಕಾರ್ಖಾನೆ ತೆರೆಯಬೇಕೆಂಬ ನಿರೀಕ್ಷೆ 3 ವರ್ಷಗಳ ಹಿಂದೆ ಇತ್ತು. ಆದರೆ ಇಂದಿಗೂ ಕೂಡ ಅಶೋಕಪುರಂ ನಿಲ್ದಾಣದ ಪಕ್ಕದಲ್ಲಿಯೇ ವರ್ಕ್ ಶಾಪ್ ಇದೆ. ಇದನ್ನು ಸ್ಥಳಾಂತರ ಮಾಡಿ ಕಡಕೋಳ ಬೃಹತ್ ರೈಲ್ವೆ ಕಾರ್ಖಾನೆ ತೆರೆಯಲು ಘೋಷಣೆ ಮಾಡುವರೆ? ಇದರಿಂದ ಉದ್ಯೋಗದ ಭರವಸೆ ಕೂಡ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮೈಸೂರಿನ ಶ್ರೀರಾಂಪುರದಲ್ಲಿ ಕ್ಲಸ್ಟರ್ ಮಟ್ಟದ ಕೈಗಾರಿಕೆಗಳು ತೆರೆಯಲು ಸ್ಥಳ ಕೂಡ ನಿಗದಿ ಮಾಡಲಾಗಿತ್ತು. ಆದರೆ, ಯಾವುದೇ ಕೆಲಸ ಕಾರ್ಯಗಳು ಕೂಡ ನಡೆದಿಲ್ಲ. ಬಜೆಟ್ನಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣ, ಕ್ಲಸ್ಟರ್ ಮಟ್ಟದ ಕೈಗಾರಿಕೆಗಳು, ಹಾಗೂ ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ರೈಲ್ವೆ ಕಾರ್ಖಾನೆ ಆರಂಭವಾಗುವುದೇ ಎಂಬ ನಿರೀಕ್ಷೆ ಸಾಕಷ್ಟಿದೆ ಇದರ ಬಗ್ಗೆ ನಾಳೆ ಬಜೆಟ್ನಲ್ಲಿ ಉತ್ತರ ಸಿಗಲಿದೆ.