ಮೈಸೂರು: ಮೇಕೆದಾಟು ಯೋಜನೆಯಿಂದ ಮೈಸೂರು ಭಾಗದ ರೈತರಿಗೆ ಆಗುವ ಅನುಕೂಲ ಏನು ಎಂಬ ಬಗ್ಗೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದೆ.
ಇಂದು ನಗರದ ರೋಟರಿ ಕ್ಲಬ್ನಲ್ಲಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯವರು ಮೇಕೆದಾಟು ಜಲಾಶಯ ನಿರ್ಮಾಣ ಮೈಸೂರು ಭಾಗಕ್ಕೆ ಎಷ್ಟು ಅನುಕೂಲ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಿಂದ ಏನೆಲ್ಲಾ ಅನುಕೂಲವಿದೆ ಎಂಬುದರ ಬಗ್ಗೆ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಧ್ಯಕ್ಷ ಲಕ್ಷ್ಮಣ್ ವಿವರಿಸಿದರು.
ಮೇಕೆದಾಟುವಿನಿಂದ ಜಲಾಶಯ ನಿರ್ಮಾಣ:
ಮೇಕೆದಾಟು ಜಲಾಶಯ ನಿರ್ಮಾಣ ಮಾಡುವುದರಿಂದ ಸುಮಾರು 67 ಟಿಎಂಸಿ ನೀರನ್ನು ಶೇಖರಣೆ ಮಾಡಲು ಜಲಾಶಯ ಆಗುತ್ತದೆ. ಜನವರಿಯಿಂದ ಜೂನ್ವರೆಗೆ ತಮಿಳುನಾಡಿಗೆ ಬಿಡುವ 32 ಟಿಎಂಸಿ ನೀರನ್ನು ಮೇಕೆದಾಟು ಜಲಾಶಯದಿಂದ ಬಿಡಬಹುದು. ಇದರಿಂದ ಮೇಲ್ಭಾಗದಲ್ಲಿರುವ ಕೆಆರ್ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ನೀರು ಶೇಖರಣೆ ಮಾಡಿ, ಈ ನೀರನ್ನು ರೈತರು ಉಪಯೋಗಿಸಿಕೊಳ್ಳಬಹುದು ಎಂದರು.
ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ನೀರು ಬಿಡಬೇಕು. ಆದರೆ ಮಳೆಗಾಲದಲ್ಲಿ ಅದಕ್ಕಿಂತ ಹೆಚ್ಚಾಗಿ ನೀರು ತಮಿಳುನಾಡಿಗೆ ಹರಿದುಹೋಗುತ್ತದೆ. ಈ ವರ್ಷದ ಮಳೆಗಾಲದ ಸಮಯದಲ್ಲಿ140 ಟಿಎಂಸಿ ನೀರು ಅಧಿಕವಾಗಿ ಹರಿದುಹೋಗಿದೆ. ತಮಿಳುನಾಡಿನಲ್ಲಿ ಹೆಚ್ಚು ಅಣೆಕಟ್ಟು ಇಲ್ಲದೇ ಇರುವ ಕಾರಣ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ಹಾಗಾಗಿ ಈ ರೀತಿಯಾದ ಹೆಚ್ಚಿನ ಪ್ರಮಾಣದ ನೀರನ್ನು ಶೇಖರಣೆ ಮಾಡಲು ಮೇಕೆದಾಟು ಜಲಾಶಯ ಅನುಕೂಲವಾಗಲಿದೆ. ಇಲ್ಲಿ ಸಂಗ್ರಹಿಸಿದ ನೀರನ್ನು ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ಇದನ್ನೂ ಓದಿ: ನಾಳೆ ಭೂಮಿಯ ಸಮೀಪ ಹಾದುಹೋಗಲಿದೆ ದೈತ್ಯ ಕ್ಷುದ್ರಗ್ರಹ: ನೋಡುವುದು ಹೇಗೆ? ಪರಿಣಾಮವೇನು? ಇಲ್ಲಿದೆ ಮಾಹಿತಿ
ಈ ಮೇಕೆದಾಟು ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಕೃಷಿಗೆ ಬಳಸಲು ಸಾಧ್ಯವಿಲ್ಲ. ಏಕೆಂದರೆ ಅಣೆಕಟ್ಟು ಇಳಿಜಾರಿನಲ್ಲಿ ಇರುವುದರಿಂದ ನೀರನ್ನು ವಾಪಸ್ ತರಲು ಸಾಧ್ಯವಿಲ್ಲ. ಜೊತೆಗೆ ಅದು ಅರಣ್ಯ ಪ್ರದೇಶವಾಗಿರುವುದರಿಂದ ಅಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ. ಜಲಾಶಯದಿಂದ ತಮಿಳುನಾಡು 7 ಕಿಮೀ ಇರುವುದರಿಂದ, ವಿದ್ಯುತ್ ಶಕ್ತಿ ಉತ್ಪಾದನೆ ಮಾಡಿದ ನಂತರ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಇದರಿಂದ ತಮಿಳುನಾಡಿಗೆ ಉಪಯೋಗ. ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಲಾಭವಿದೆ. ತಮಿಳುನಾಡಿಗೆ ಇದರಿಂದ ಶೇ.90ರಷ್ಟು ಉಪಯೋಗವಾದರೆ ಕರ್ನಾಟಕಕ್ಕೆ ಕೇವಲ ಶೇ.10ರಷ್ಟು ಅನುಕೂಲವಿದೆ. ಇದನ್ನು ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು ವಿರೋಧ ಮಾಡಬಾರದು ಎಂದು ಹೇಳಿದರು.
ಸುಪ್ರೀಂಕೋರ್ಟ್ ಕೂಡ ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ನಮ್ಮ ಜಲಾನಯನ ಪ್ರದೇಶದಲ್ಲಿ ಬಿದ್ದ ನೀರನ್ನು ಉಪಯೋಗಿಸುವ ಹಕ್ಕು ನಮಗೆ ಇದೆ. ಆದ್ದರಿಂದ ಇದಕ್ಕೆ ತಮಿಳುನಾಡನ್ನು ಕೇಳಿ ಅಣೆಕಟ್ಟು ಕಟ್ಟುವ ಅವಶ್ಯಕತೆ ಇಲ್ಲ.
'ಅರಣ್ಯ ಇಲಾಖೆಯ ಅನುಮತಿ ಪಡೆಯುವ ಕೆಲಸ ರಾಜ್ಯ ಸರ್ಕಾರ ಮಾಡಲಿ'
ಕೇಂದ್ರದಲ್ಲಿ ಸಿಡಬ್ಲೂಸಿ, ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿಯನ್ನು ಕೊಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಅನುಮತಿ ಸಿಕ್ಕರೆ ನಾಳೆಯಿಂದಲೇ ಅಣೆಕಟ್ಟು ನಿರ್ಮಾಣ ಮಾಡಬಹುದು. ತಮಿಳುನಾಡಿನವರು ಯಾವಾಗಲೂ ಖ್ಯಾತೆ ತೆಗೆಯುತ್ತಾರೆ. ಕೆಆರ್ಎಸ್ ನಿರ್ಮಾಣ ಮಾಡುವಾಗಲು ಅವರು ಖ್ಯಾತೆ ತೆಗೆದಿದ್ದರು.
ಸುಪ್ರೀಂಕೋರ್ಟ್ ಕರ್ನಾಟಕಕ್ಕೆ 270+114.75 ಟಿಎಂಸಿ ನೀರನ್ನು ಹಂಚಿಕೆ ಮಾಡಿದ್ದಾರೆ. ಆದರೆ ನಮ್ಮಲ್ಲಿ ಕೇವಲ 100 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿದ್ದು, ಇನ್ನೂ ಹೆಚ್ಚು ನೀರನ್ನು ಶೇಖರಿಸಲು ಮೇಕೆದಾಟು ಜಲಾಶಯ ನಿರ್ಮಾಣ ಆಗಬೇಕು. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಣೆಕಟ್ಟು ನಿರ್ಮಾಣಕ್ಕೆ ಒತ್ತಡ ಹೇರಬೇಕು. ಇದರಿಂದ ಹತ್ತು ಜಿಲ್ಲೆಯ ಜನರಿಗೆ ಮತ್ತು 5 ಜಿಲ್ಲೆಯ ರೈತರು 2 ಮತ್ತು 3 ನೇ ಬೆಳೆ ಬೆಳೆಯಲು ಸಾಧ್ಯ ಎಂದು ಲಕ್ಷ್ಣಣ್ ಹೇಳಿದರು.
ಇದನ್ನೂ ಓದಿ:ಅರಬಗಟ್ಟೆ ವಸತಿ ಶಾಲೆಯಲ್ಲಿ ಆರು ಮಕ್ಕಳಿಗೆ ಕೊರೊನಾ.. ಶಾಸಕ ರೇಣುಕಾಚಾರ್ಯ ಭೇಟಿ
ಕೇಂದ್ರ ಸರ್ಕಾರಕ್ಕೆ ಡಿಆರ್ಪಿಗೆ ಕಳುಹಿಸಿದ್ದು, ಇದು 9 ಸಾವಿರ ಕೋಟಿಯ ಯೋಜನೆಯಾಗಿದೆ. ಈ ಯೋಜನೆಗೆ ಸಿಡಬ್ಲೂಸಿ ಮತ್ತು ಪರಿಸರ ಇಲಾಖೆ ಅನುಮತಿ ನೀಡಬೇಕು. ಅರಣ್ಯ ಇಲಾಖೆಯವರಿಗೆ ಪರ್ಯಾಯವಾಗಿ ಬೇರೆ ಕಡೆ ಜಾಗ ನೀಡಲಾಗಿದೆ. ಜನರು ಮತ್ತು ಸರ್ಕಾರದವರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರಬೇಕು.
ತಮಿಳುನಾಡಿನವರು ಅಣೆಕಟ್ಟು ನಿರ್ಮಾಣ ಮಾಡದೆ ಇರುವ ಹಾಗೆ ಖ್ಯಾತೆ ತೆಗೆಯುತ್ತಾರೆ. ರಾಜಕೀಯ ಲಾಭಕ್ಕಾಗಿ ನಮ್ಮ ರಾಜಕಾರಣಿಗಳು ಸುಮ್ಮನೆ ಇರುತ್ತಾರೆ. ನಮ್ಮ ಎಂಪಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೇ ಇದ್ದಾರೆ. ಅವರಿಗೂ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಜನರಿಗೂ ಇದರ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯಿಂದ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಚೇರ್ಮನ್ ಎಂ.ಲಕ್ಷ್ಮಣ್ ಈಟಿವಿ ಭಾರತಗೆ ತಿಳಿಸಿದರು.