ಮೈಸೂರು: ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕೆಲಸವನ್ನು ನಮ್ಮ ಅಗ್ನಿಶಾಮಕ ದಳ ಮಾಡುತ್ತಿದೆ ಎಂದು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕಳೆದ 1 ವಾರದಿಂದ ಎಡಬಿಡದೆ ಮಡಿಕೇರಿ ಹಾಗೂ ಮೈಸೂರು ಜಿಲ್ಲೆಯ ಕೆಲವು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನರು ಪ್ರವಾಹದಲ್ಲಿ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಜಿಲ್ಲಾಡಳಿತದ ಸೂಚನೆಯ ಮೇರೆಗೆ ಹೆಚ್.ಡಿ.ಕೋಟೆ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 5 ಜನರನ್ನು ನಿನ್ನೆ ರಕ್ಷಣೆ ಮಾಡಿದ್ದು, ಇಂದು ಸಹ ರಕ್ಷಣಾ ಕಾರ್ಯ ಮುಂದುವರೆದಿದೆ.
ಅಲ್ಲದೇ ಬೆಂಗಳೂರಿನಿಂದ 2 ರಕ್ಷಣಾ ತಂಡಗಳನ್ನು ಕರೆಸಲಾಗಿದೆ. 1 ತಂಡವನ್ನು ಮಡಿಕೇರಿಗೆ ಕಳುಹಿಸಲಾಗಿದ್ದು, ಮತ್ತೊಂದು ತಂಡವನ್ನು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಭಾಗದಲ್ಲಿ ಲಕ್ಷ್ಮಣ ತೀರ್ಥ ನದಿಯ ಪ್ರವಾಹದಿಂದ ಉಂಟಾದ ಪರಿಸ್ಥಿತಿ ನಿಭಾಯಿಸಲು ಕಳುಹಿಸಲಾಗಿದೆ.
ಇಲ್ಲಿಯವರೆಗೆ ಮಡಿಕೇರಿಯಲ್ಲಿ 159 ಜನರನ್ನು ರಕ್ಷಣೆ ಮಾಡಲಾಗಿದ್ದು, ಇಂದು ಸಹ ರಕ್ಷಣಾ ಕಾರ್ಯದಲ್ಲಿ ನಮ್ಮ ತಂಡ ಕಾರ್ಯನಿರತವಾಗಿದೆ. ಇನ್ನೂ ಹೆಚ್ಚು ರಕ್ಷಣಾ ಪಡೆ ಬೇಕಾದರೆ ಹೆಚ್ವಿನ ತಂಡವನ್ನು ಕರೆಸಿಕೊಳ್ಳುತ್ತೇವೆ. ನಮ್ಮ ರಕ್ಷಣಾ ಕಾರ್ಯ ಹೀಗೆಯೇ ನಡೆಯಲಿದೆ ಎಂದು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಜಿ.ಈಶ್ವರ್ ನಾಯಕ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.