ಮೈಸೂರು: ಇಂದು ಮಧ್ಯಾಹ್ನ 12.30ರ ಶುಭ ಅಭಿಜಿನ್ ಲಗ್ನದಲ್ಲಿ ಅರ್ಜುನ ನೇತೃತ್ವದ 6 ಆನೆಗಳನ್ನು ಸಾಂಪ್ರದಾಯಿಕವಾಗಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಅರಮನೆಗೆ ಸ್ವಾಗತಿಸಲಾಗುತ್ತಿದೆ.
ಇದೇ ತಿಂಗಳ 22 ರಂದು ಅರ್ಜುನ ನೇತೃತ್ವದ 6 ಆನೆಗಳನ್ನು ಗಜ ಪಯಣದ ಮೂಲಕ ವೀರನಹೊಸಹಳ್ಳಿಯಿಂದ ಮೈಸೂರಿಗೆ ಕರೆ ತರಲಾಯಿತು. ಈ ಆರು ಆನೆಗಳು ನಗರದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದವು. ಇಂದು ಮಧ್ಯಾಹ್ನ 12:30 ಕ್ಕೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಅರಮನೆಯ ಮುಂಭಾಗದ ಜಯ ಮಾರ್ತಾಂಡ ದ್ವಾರದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದ ಗಣ್ಯರ ತಂಡ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಅರಮನೆಗೆ ಸ್ವಾಗತಿಸಲಿದ್ದಾರೆ.
ಈ ಆನೆಗಳಿಗೆ ಗಾಡ್ ಆಫ್ ಹಾನರ್ ಮುಖಾಂತರ ಗೌರವ ವಂದನೆ ಸಲ್ಲಿಸುವುದು ವಿಶೇಷ. ಸಾಂಪ್ರದಾಯಿಕವಾಗಿ ಪೂರ್ಣ ಕುಂಭ ಹೊತ್ತ ಮಹಿಳೆಯರು, ಮಂಗಳವಾದ್ಯ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ಹಲವಾರು ಕಲಾ ತಂಡಗಳು ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಇದಕ್ಕೂ ಮುನ್ನ ಅರಣ್ಯ ಭವನದಲ್ಲಿ ತಂಗಿರುವ ಈ ಆನೆಗಳಿಗೆ 11 ಗಂಟೆಗೆ ಅರಣ್ಯ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಆರು ಆನೆಗಳಿಗೂ ಪೂಜೆ ಸಲ್ಲಿಸಿ ಅರಮನೆಗೆ ಬೀಳ್ಕೊಡಲಿದ್ದಾರೆ.