ಮೈಸೂರು: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಮೈಸೂರು ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಹೂಟಗಳ್ಳಿಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಂದು ಬಾರಿಯೂ ಮೇಯರ್ ಸ್ಥಾನ ಅಲಂಕರಿಸಿಲ್ಲ. ಆದ್ದರಿಂದ ನಮಗೆ ಮೇಯರ್ ಸ್ಥಾನ ಕೊಡುವಂತೆ ಎಚ್.ಡಿ ಕುಮಾರಸ್ವಾಮಿ ಅವರನ್ನು ಕೇಳಿದ್ದೇವೆ. ಅವರು ಪಕ್ಷದ ಸದಸ್ಯರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ಹೇಳುತ್ತೇನೆ ಅಂತ ಹೇಳಿದ್ದಾರೆ. ರಾಜಕೀಯದಲ್ಲಿ ಕೊಟ್ಟು-ತೆಗೆದುಕೊಳ್ಳುವುದು ಇದ್ದೇ ಇದೆ ಎಂದರು.
ಮೈಸೂರಿನಲ್ಲಿ ಮೇಯರ್ ಚುನಾವಣೆ ಸಂಬಂಧ ಮಾತ್ರ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಮೇಯರ್ ಸ್ಥಾನ ಚುನಾವಣೆ ಬಗ್ಗೆ ನಿರ್ಧಾರ ಮಾಡಲಾಗಿಲ್ಲ ಎಂದು ತಿಳಿಸಿದರು.