ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ದಿನಗಳ ಕಾಲ ರಣಹದ್ದುಗಳ ಸಮೀಕ್ಷೆ ನಡೆಯಿತು. ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸೇರಿ ಮೂರು ರಾಜ್ಯಗಳಲ್ಲಿ ರಾಜ್ಯ ಅರಣ್ಯ ಇಲಾಖೆ, ವೈಲ್ಡ್ ಲೈಫ್ ಕನ್ಸರ್ವೇಶನ್ ಫೌಂಡೇಶನ್ ವತಿಯಿಂದ ಈ ಸರ್ವೇ ಕಾರ್ಯಕ್ರಮ ನಡೆದಿದೆ.
ಈ ಸರ್ವೇ ಪ್ರಕಾರ ಬಂಡೀಪುರದಲ್ಲಿ 245 ಮೂರು ವಿಧದ ರಣಹದ್ದುಗಳು ಕಂಡುಬಂದಿವೆ. ಈ ಪೈಕಿ ಭಾರತೀಯ ರಣಹದ್ದು 34, ಕೆಂಪು ತಲೆಯ ರಣಹದ್ದು 43 ಹಾಗು ಬಿಳಿ ಬೆನ್ನಿನ ರಣ ಹದ್ದುಗಳು 168 ಎಂದು ಪತ್ತೆ ಮಾಡಲಾಗಿದೆ. ಒಟ್ಟಾರೆ 245 ರಣಹದ್ದುಗಳು ಕಾಣಿಸಿಕೊಂಡಿವೆ ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಬಂಡೀಪುರ ಹುಲಿ ಯೋಜನೆಯ ಮುಖ್ಯಸ್ಥ ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದರು.
ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಭಾರತೀಯ ರಣ ಹದ್ದು 13, ಬಿಳಿ ಬೆನ್ನಿನ ರಣ ಹದ್ದು 61, ಕೆಂಪು ತಲೆಯ ರಣಹದ್ದು 30, ಒಟ್ಟು ಮೂರು ವಿಧದ 104 ರಣಹದ್ದುಗಳು ಕಂಡುಬಂದಿವೆ. ಈ ವ್ಯಾಪ್ತಿಯಲ್ಲಿ ರಣಹದ್ದುಗಳ ಸಂತಾನೋತ್ಪತ್ತಿ ಕ್ರಿಯೆಗಳು ನಡೆಯುತ್ತಿರುವುದು ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಮೀಕ್ಷೆ ಹೇಗೆ ನಡೆಯಿತು?: ರಣಹದ್ದು ಸಮೀಕ್ಷೆಯಲ್ಲಿ 120 ಸಿಬ್ಬಂದಿ ಭಾಗವಹಿಸಿದ್ದರು. ಬಂಡೀಪುರ ಅರಣ್ಯ ಪ್ರದೇಶದ 1,200 ಚದರ ಕಿಲೋಮೀಟರ್ ವ್ಯಾಪ್ತಿ, 13 ವಲಯ ವ್ಯಾಪ್ತಿಗಳಲ್ಲಿ 33 ಪಾಯಿಂಟ್ಗಳನ್ನು ಗೊತ್ತು ಮಾಡಿಕೊಳ್ಳಲಾಗಿತ್ತು. ಒಂದೊಂದು ತಂಡದಲ್ಲಿ ಒಬ್ಬ ಪಕ್ಷಿ ಪರಿಣತರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ರಣಹದ್ದುಗಳು ದೊಡ್ದ ಮರಗಳಲ್ಲಿ ಆಶ್ರಯ ಪಡೆಯುತ್ತವೆ. ಇಂತಹ ಸ್ಥಳಗಳಲ್ಲಿ ದೊಡ್ಡ ಗೋಪುರದ ಮೇಲೆ ಅಂದರೆ, ಅರಣ್ಯದಲ್ಲಿರುವ ವಾಚ್ ಟವರ್ಗಳ ಮೇಲೆ ನಿಂತು ಸರ್ವೇ ಕೆಲಸ ಮಾಡಲಾಗಿದೆ.
ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಸಮೀಕ್ಷೆಯಲ್ಲಿ ಒಟ್ಟು ಮೂರು ವಿಧದ 349 ರಣಹದ್ದುಗಳು ಪತ್ತೆಯಾಗಿವೆ. ತಮಿಳುನಾಡು ಹಾಗೂ ಕೇರಳದಲ್ಲಿ ನಡೆದ ಸಮೀಕ್ಷೆಯಲ್ಲಿ ಸಿಕ್ಕ ರಣ ಹದ್ದುಗಳ ಸಂಖ್ಯೆಯನ್ನು ಆಯಾ ರಾಜ್ಯದ ಅರಣ್ಯಾಧಿಕಾರಿಗಳು ದೃಢೀಕರಿಸಿಲ್ಲ. ಸಿಬ್ಬಂದಿಗೆ ಬಂಡೀಪುರ ಹುಲಿ ಯೋಜನೆ ಮುಖ್ಯಸ್ಥ ಡಾ.ರಮೇಶ್ ಕುಮಾರ್ ಪ್ರಮಾಣ ಪತ್ರ ವಿತರಿಸಿದ್ದಾರೆ.
ರಣಹದ್ದುಗಳಿಂದ ಪರಿಸರಕ್ಕೇನು ಪ್ರಯೋಜನ?: ಮಾಂಸಹಾರಿ ಪ್ರಾಣಿಗಳು ಸಸ್ಯಹಾರಿ ಪ್ರಾಣಿಗಳನ್ನು ತಿಂದು ಬದುಕಿದರೆ, ಮಾಂಸಹಾರಿ ಪ್ರಾಣಿಗಳು ಸತ್ತಾಗ ಅವುಗಳನ್ನು ತಿನ್ನುವುದು ರಣಹದ್ದುಗಳು. ಆದ್ದರಿಂದ ರಣ ಹದ್ದುಗಳನ್ನು 'ಪರಿಸರ ಸ್ವಚ್ಚತೆಯ ಪೌರಕಾರ್ಮಿಕ' ಎನ್ನುತ್ತಾರೆ. ಆ ಮೂಲಕ ಪರಿಸರ ಸಮತೊಲನಕ್ಕೆ ತನ್ನದೇ ಕೊಡುಗೆಯನ್ನು ಅವುಗಳು ನೀಡುತ್ತವೆ. ಇತ್ತೀಚೆಗೆ ರಣ ಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಅರಣ್ಯ ನಾಶ, ಅರಣ್ಯ ಪ್ರದೇಶಕ್ಕೆ ಬೀಳುವ ಬೆಂಕಿ ಹಾಗೂ ನಾಡಿನ ಪ್ರದೇಶಗಳಲ್ಲಿ ಡೈಕ್ಲೊಫಿನಾಕ್ ಔಷಧಿ ಇರುವ ಜಾನುವಾರುಗಳ ಮೃತದೇಹ ತಿಂದು ರಣಹದ್ದುಗಳು ಸಾವನ್ನಪ್ಪುತ್ತಿವೆ. ಇದು ರಣಹದ್ದು ಸಂಖ್ಯೆ ಕ್ಷೀಣಿಸಲು ಕಾರಣವಾಗಿದೆ ಎನ್ನುತ್ತಾರೆ ಡಿಸಿಎಫ್ ಬಸವರಾಜು.
ಸರ್ವೇಯಲ್ಲಿ ಭಾಗವಹಿಸಿದ ವನ್ಯಜೀವಿ ತಜ್ಞ ರಾಜಕುಮಾರ್ ದೇವರಾಜ್ ಅರಸ್ ಈಟಿವಿ ಭಾರತ್ಗೆ ಮಾಹಿತಿ ನೀಡಿ, "ರಣಹದ್ದುಗಳ ಬಗ್ಗೆ ಜನರಲ್ಲಿರುವ ತಪ್ಪು ಭಾವನೆಗಳನ್ನು ತೆಗೆದು ಹಾಕಬೇಕು. ರಣ ಹದ್ದುಗಳಿಂದ ಪರಿಸರ ಸಮತೋಲನದ ಜೊತೆಗೆ ಪರಿಸರ ಸ್ವಚ್ಚತೆಗೂ ಸಹಾಯವಾಗುತ್ತದೆ. ನಗರ ಪ್ರದೇಶಗಳಲ್ಲಿ ರಣಹದ್ದುಗಳು ವಿಷಯುಕ್ತ ಸತ್ತ ಪ್ರಾಣಿಗಳನ್ನು ತಿಂದು ಸಾಯುತ್ತಿವೆ. ಇವುಗಳ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದರು.
ಇದನ್ನೂ ಓದಿ: 10 ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆಯಲ್ಲಿ ಕುಸಿತ ಆತಂಕ: 3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ