ಮೈಸೂರು : ನನ್ನನ್ನು ರಾಜಕೀಯವಾಗಿ ಮುಗಿಸಿದ್ದೇ ಸಿಎಂ ಪುತ್ರ ವಿಜಯೇಂದ್ರ. ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರನ್ನು ಮುಗಿಸಲು ಹೊರಟಿರುವುದು ಕೂಡ ಅದೇ ವಿಜಯೇಂದ್ರ. ಜೊತೆಗೆ ಜಾರಕಿಹೊಳಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರವಿದೆ ಎಂಬ ಸ್ಫೋಟಕ ಹೇಳಿಕೆಯನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ನೀಡಿದ್ದು, ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟುಮಾಡಿದೆ.
ಇಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೌಪ್ಯ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್. ವಿಶ್ವನಾಥ್, ಯಡಿಯೂರಪ್ಪ ಅವರನ್ನು ಈ ಹಿಂದೆ ನಕಲಿ ಸಹಿ ಮಾಡಿ ಜೈಲಿಗೆ ಕಳುಹಿಸಿದ್ದೇ ಪುತ್ರ ವಿಜಯೇಂದ್ರ. ಈಗ ಇಡೀ ಕುಟುಂಬವನ್ನೆ ಜೈಲಿಗೆ ಕಳುಹಿಸುತ್ತಾನೆ ಎಂದರು.
ಸಿಡಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರ ಇದೆ : ವಿಜಯೇಂದ್ರ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಎಲ್ಲಾ ಹಿಂದುಳಿದ ನಾಯಕರನ್ನು ಮುಗಿಸಲು ಹೊರಟಿದ್ದಾನೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ದೇ ವಿಜಯೇಂದ್ರ. ರಮೇಶ್ ಜಾರಕಿಹೊಳಿ ಹಾಗೂ ಶ್ರೀರಾಮುಲು ಅವರನ್ನು ಮುಗಿಸಲು ಹೊರಟಿದ್ದಾನೆ. ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವಿಜಯೇಂದ್ರ ಪಾತ್ರ ಇದೆ. ಎಷ್ಟು ದಿನ ನಿಮ್ಮ ಆಟ ನಡೆಯುತ್ತದೆ ಎಂಬುದನ್ನು ನೋಡೊಣ. ಆದ್ದರಿಂದ ಈಗ ಸಿಎಂ ಬದಲಾವಣೆ ಆಗಬೇಕು. ಈ ರಾಜಕಾರಣ ಕೊನೆಯಾಗಬೇಕು ಎಂದು ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತಾರೆ : ಯಡಿಯೂರಪ್ಪ ವಿರುದ್ದ ಮಾತನಾಡುವವರು ಧೂಳಿಗೆ ಸಮ ಎಂಬ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ ವಿಶ್ವನಾಥ್, ಸೋಮಶೇಖರ್ ನೀನು ಬೇಕಾದರೆ ಯಡಿಯೂರಪ್ಪನ "ಪಾದ ನೆಕ್ಕು" ಎಂದು ತಿರುಗೇಟು ನೀಡಿದರು. ನಂತರ ಮಾತನಾಡಿದ ಅವರು, ನಿನಗೆ ಯಡಿಯೂರಪ್ಪ ಮಗನ ಭ್ರಷ್ಟಾಚಾರ ಕಾಣಿಸುವುದಲ್ಲವೇ?.
ರಾಜ್ಯದಲ್ಲಿ ಬಿಜೆಪಿಗೆ 104 ಎಂಎಲ್ಎ, 25 ಎಂಪಿ ಸೀಟ್ ಬಂದಿದ್ದು, ಯಡಿಯೂರಪ್ಪ ಅವರಿಂದಲ್ಲ. ಬದಲಾಗಿ ನರೇಂದ್ರ ಮೋದಿ ಅವರಿಂದ ಎಂದು ಹೇಳಿದ ಅವರು, ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಸ್ವಲ್ಪ ತಡವಾಗಬಹುದು. ಖಂಡಿತ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂದರು.
ಸುಮಲತಾ ವಿರುದ್ದ ಬಳಸಿರುವ ಪದ ಸರಿಯಿಲ್ಲ : ರಾಜ್ಯದಲ್ಲಿ 3 ಪಕ್ಷಗಳ ಸರ್ಕಾರ ನಡೆಯುತ್ತಿದೆ ಎಂಬ ಯೋಗೇಶ್ವರ್ ಹೇಳಿಕೆ ಸರಿಯಿದೆ. ಇದಕ್ಕೆ ಜಿಂದಾಲ್ ಪ್ರಕರಣವೇ ಸಾಕ್ಷಿ ಎಂದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಸದೆ ಸುಮಲತಾ ವಿರುದ್ದ ಬಳಸಿರುವ ಪದ ಸರಿಯಿಲ್ಲ. ಒಬ್ಬ ಹೆಣ್ಣು ಮಗಳನ್ನು "ಮಲಗಿಸಿ ಎಂದರೇ" ಏನು ಅರ್ಥ. ಮಿಸ್ಟರ್ ಕುಮಾರಸ್ವಾಮಿ, ಮೈಂಡ್ ಯುವರ್ ಲಾಂಗ್ವೇಜ್ ಎಂದು ಗುಡುಗಿದರು.
ಓದಿ: ನನ್ನ ಹೇಳಿಕೆಯಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಸುಮಲತಾ ಹೊರಟಿದ್ದಾರೆ: ಹೆಚ್ಡಿಕೆ