ಮೈಸೂರು: ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವುದೇ ನಮ್ಮ ಗುರಿ. ಯಾವುದೇ ಕಾರಣಕ್ಕೂ ಬಿಜೆಪಿ 8 ಸ್ಥಾನಗಳಲ್ಲಿ ಗೆಲ್ಲುವುದಿಲ್ಲ. ಹಾಗಾಗಿ ಸರ್ಕಾರ ಪತನ ನಿಶ್ಚಿತ. ಮತ್ತೊಂದು ಚುನಾವಣೆ ಎದುರಿಸಲು ಸಾಧ್ಯವಾಗದ ಹಿನ್ನಲೆ ಜಾತ್ಯಾತೀತ ಪಕ್ಷಗಳು ಒಂದಾಗಲಿವೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನ ದೂರ ಇಡಲು ಶಿವಸೇನೆ, ಎಂಸಿಪಿ, ಕಾಂಗ್ರೆಸ್ ಒಂದಾಗಿವೆ. ಮಹಾರಾಷ್ಟ್ರದ ಬೆಳವಣಿಗೆ ನಂತರ ರಾಜ್ಯದಲ್ಲೂ ಬದಲಾವಣೆ ಗಾಳಿ ಬೀಸಿದೆ. ಈ ಹಿನ್ನೆಲೆ ಬಿಜೆಪಿ ಶತ್ರುಗಳಾದ ಕಾಂಗ್ರೆಸ್, ಜೆಡಿಎಸ್ ಒಂದಾಗಲಿವೆ ಎಂದರು.
ಮೈತ್ರಿ ಸರ್ಕಾರದ ಚಿಂತನೆ ಹಗಲು ಕನಸಲ್ಲ, ಅದು ನನಸಾಗಲಿದೆ. ಬಿಜೆಪಿ ಅಡ್ಡ ದಾರಿಯಲ್ಲಿ ಅಧಿಕಾರ ಹಿಡಿದಿದೆ, ಅದು ಉಳಿಯಲ್ಲ. ಉಪ ಚುನಾವಣೆ ಫಲಿತಾಂಶ ಇಡೀ ದೇಶಕ್ಕೆ ವಿಸ್ತಾರವಾಗಲಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೇ ನಮ್ಮ ಟಾರ್ಗೆಟ್ ಎಂದರು.
ಬಿಜೆಪಿ ಅಡ್ಡ ದಾರಿ ಹಿಡಿದ ಪರಿಣಾಮ ಮೈತ್ರಿ ಸರ್ಕಾರ ಪತವಾಯ್ತೇ ಹೊರತು ನಮ್ಮ ತಪ್ಪಿನಿಂದ ಅಲ್ಲ. ನಮಗೆ ಸಿಎಂ ಯಾರೆಂಬುದು ಪ್ರಶ್ನೆ ಅಲ್ಲ. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವುದು ಮುಖ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ದರಿದ್ರ ಸರ್ಕಾರಗಳು ಎಂದು ಕಿಡಿಕಾರಿದರು.