ಮೈಸೂರು:ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ವೆಂಕಯ್ಯನಾಯ್ಡು ಅವರು ನಾಡ ಅಧಿದೇವತೆ ಶ್ರೀಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಪುಳಕಿತರಾದರು.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಶುಕ್ರವಾರ ಸಂಜೆ ಆಗಮಿಸಿ ಇಂದು ಆರ್ಐಇ ಹಾಗೂ ಭಾರತೀಯ ಭಾಷಾ ಸಂಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆಯಲ್ಲಿ ಪತಿಯೊಂದಿಗೆ ವೇದಿಕೆ ಹಂಚಿಕೊಳ್ಳದ ಪತ್ನಿ ಉಷಾ ಅವರು ನೇರವಾಗಿ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು, ಸಾಂಸ್ಕೃತಿಕ ನಗರಿಯ ಮಾಹಿತಿಯನ್ನು ಪಡೆದುಕೊಂಡರು.
ಅಲ್ಲದೇ ಮೈಸೂರು ಮಹಾರಾಜರು ನೀಡಿದ ಕೊಡುಗೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮೈಸೂರು ಸುಂದರ ಹಾಗೂ ಸ್ವಚ್ಛ ನಗರವಾಗಿದೆ ಎಂದು ಗುಣಗಾನ ಮಾಡಿದರು.