ಮೈಸೂರು: 13ನೇ ಶತಮಾನದ ಹೊಯ್ಸಳರ ಕಾಲದ ವಿಶಿಷ್ಟವಾದ ಅಪ್ರಕಟಿತ ವೀರಗಲ್ಲು ಶಾಸನ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬಾಕಶೆಟ್ಟಿಹಳ್ಳಿ ಗ್ರಾಮದ ಬಳಿ ಪತ್ತೆಯಾಗಿದೆ. ಇದು ಅಪರೂಪದ ಹೊಯ್ಸಳರ ವೀರ ಬಲ್ಲಾಳನ ಕಾಲದ, ಸೋಪುಗಲ್ಲಿನ ವಿಶಿಷ್ಟ ವೀರಗಲ್ಲು ಶಾಸನವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಪುರಾತತ್ವ ವಿಭಾಗದವರು ವೀರಗಲ್ಲು ಶಾಸನವನ್ನು ಪತ್ತೆ ಹಚ್ಚಿದ್ದಾರೆ.
ಪತಿ ಮತ್ತು ಪತ್ನಿಯ ಸ್ಮರಣಾರ್ಥ ಕೆತ್ತಿರುವ ವೀರಗಲ್ಲು: ಈ ವಿರಗಲ್ಲಿನ ವಿಶೇಷತೆ ಏನೆಂದರೆ. ವೀರಗಲ್ಲುಗಳನ್ನು ಹೋರಾಟ ಮಾಡಿದವರ ಸ್ಮರಣೆಗಾಗಿ ನಿರ್ಮಿಸುವುದು ಸಾಮಾನ್ಯ. ಆದರೆ, ಇಲ್ಲಿ ಕಂಡುಬರುವ ವಿರಗಲ್ಲಿನಲ್ಲಿ ಪತಿ ಮತ್ತು ಪತ್ನಿಯ ಸ್ಮರಣಾರ್ಥ ಕೆತ್ತಿರುವುದು ವಿಶೇಷವಾಗಿದೆ. ಈ ರೀತಿಯ ವೀರಗಲ್ಲು ಇಲ್ಲಿಯವರೆಗೂ ಎಲ್ಲಿಯೂ ಪತ್ತೆಯಾಗಿಲ್ಲ. ಈ ವೀರಗಲ್ಲು ಶಾಸನ 4 ಅಡಿ 10 ಇಂಚು ಉದ್ದ ಮತ್ತು 3 ಅಡಿ ಅಗಲ 6.5 ಇಂಚು ದಪ್ಪವಿದೆ. ಇದು ಮೂರು ಹಂತದಲ್ಲಿ ಶಿಲ್ಪ ಪಟ್ಟಿಕೆಗಳನ್ನ ಹೊಂದಿದ್ದು, ಈ ಶಿಲ್ಪ ಪಟ್ಟಿಕೆಗಳ ಮದ್ಯೆ ಎಂಟು ಸಾಲುಗಳಲ್ಲಿ ಬರೆಯಲ್ಪಟ್ಟಿರುವ ಹೊಯ್ಸಳರ ಕಾಲದ ಕನ್ನಡ ಲಿಪಿ ಶಾಸನ ಇದಾಗಿದೆ.
ಕನ್ನಡ ಶಾಸ್ತ್ರೀಯ ಭಾಷೆಗೆ ಭಾಷಾಂತರ ಮಾಡುವ ಪ್ರಯತ್ನ: ಈ ಬಗ್ಗೆ ಪುರಾತತ್ವ ತಜ್ಞರಾದ ಪ್ರೊ. ರಂಗರಾಜು ಮಾತನಾಡಿ, ಈ ವೀರಗಲ್ಲು ಶಾಸನ ಹೊಯ್ಸಳರ ವೀರ ಬಲ್ಲಾಳನ ಕಾಲದಲ್ಲಿ ಕೆತ್ತಲ್ಪಟ್ಟಿದ್ದು, 1209 ಫೆಬ್ರವರಿ 17 ರಂದು ಗುರುವಾರ ಕೆತ್ತಲಾಗಿದೆ. ಇದರಲ್ಲಿ ಮೊದಲ ವಾಕ್ಯದಲ್ಲಿ ಬಲ್ಲಾಳನ ಬಗ್ಗೆ ಹಾಗೂ ಆತನ ಬಿರುದುಗಳ ಬಗ್ಗೆ ಮಾಹಿತಿ ಇದೆ. ನಂತರದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯಗಳನ್ನು ಕೆತ್ತಲಾಗಿದೆ. ವೀರಗಲ್ಲು ಶಾಸನದ ಅಕ್ಷರಗಳು ಮಾಸಿಲ್ಲ, ಈ ವೀರಗಲ್ಲಿನ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿ ಸಂರಕ್ಷಿಸಲಾಗುತ್ತದೆ. ನಂತರ ಪುರಾತತ್ವ ಇಲಾಖೆ ಜೂತೆ ಚರ್ಚಿಸಿ ಕನ್ನಡ ಶಾಸ್ತ್ರೀಯ ಭಾಷೆಗೆ ಭಾಷಾಂತರ ಮಾಡುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಹೊಯ್ಸಳರ ವೀರ ಬಲ್ಲಾಳನ ಕಾಲದಲ್ಲಿ ಈ ಶಾಸನ ಕೆತ್ತಲಾದ ವೀರಗಲ್ಲು ಶಾಸನ ವಿಶೇಷತೆ ಏನೆಂದರೆ ರಾಜ ಸತ್ತಾಗ ಹೆಂಡತಿಯು ಸಹ ಸಾಯುತ್ತಿದ್ದಳು. ಅದೇ ರೀತಿ ಈ ಶಿಲಾ ಶಾಸನದಲ್ಲಿ ಗಂಡ ಮತ್ತು ಹೆಂಡತಿ ಒಟ್ಟಿಗೆ ಸಾಯುವುದನ್ನ ತೋರಿಸಲಾಗಿದೆ ಎಂದು ಪುರಾತತ್ವ ತಜ್ಞರಾದ ಪ್ರೊ. ರಂಗರಾಜು ಇವರ ಮಾರ್ಗದರ್ಶನದಲ್ಲಿ ಈ ಶಾಸನವನ್ನು ಪತ್ತೆ ಮಾಡಿರುವ ಶಶಿಧರ್ ತಿಳಿಸಿದರು.
ಧರ್ಮಸ್ಥಳ ದೇವಾಲಯ ಸಂರಕ್ಷಣಾ ಸಮಿತಿಯಿಂದ ದೇವಾಲಯಗಳ ಸಂರಕ್ಷಣೆ : ಧರ್ಮಸ್ಥಳದ ದೇವಾಲಯಗಳ ಸಂರಕ್ಷಣಾ ಸಮಿತಿಯವರಿಂದ, ಕಳೆದ 27 ವರ್ಷಗಳಿಂದ ಪುರಾತನ ಸುಮಾರು 260 ದೇವಾಲಯಗಳನ್ನು ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆಯವರು ಸಂರಕ್ಷಣೆ ಮಾಡುತ್ತಿದ್ದಾರೆ. ಇದರಲ್ಲಿ ಶೇಕಡಾ 20 ರಷ್ಟು ಗ್ರಾಮದವರು, ಶೇಕಡಾ 40 ರಷ್ಟು ಸರ್ಕಾರ, ಉಳಿದ ಶೇಕಡಾ 40 ರಷ್ಟು ಧರ್ಮಸ್ಥಳ ಧರ್ಮೋತ್ಥಾನ ಸಮಿತಿ ನೀಡುತ್ತಿದ್ದು. ಇದರಲ್ಲಿ ಗ್ರಾಮೀಣ ಭಾಗದ ಹಲವಾರು ದೇವಾಲಯಗಳನ್ನ ಸಂರಕ್ಷಣೆ ಮಾಡಲ್ಪಟ್ಟಿವೆ ಎಂದು ಪ್ರೊ. ರಂಗರಾಜನ್ ವಿವರಿಸುತ್ತಾರೆ.
ಇದನ್ನೂ ಓದಿ:ಪ್ರಾಣಾಯಾಮ: ಬರಿಗಣ್ಣಿನಲ್ಲಿ 42 ನಿಮಿಷ ಸೂರ್ಯನನ್ನು ನೋಡಿ ದಾಖಲೆ ಬರೆದ ಸಾಹಸಿ