ಮೈಸೂರು : ತಿ.ನರಸೀಪುರ ಚೌಡೇಶ್ವರಿ ಯುವಕರ ಬಳಗ ಆಯೋಜಿಸಿದ್ದ ಜೊಡೆತ್ತು ಓಟದ ಸ್ಪರ್ಧೆ ವೇಳೆ ಎತ್ತಿನ ಗಾಡಿ ಹರಿದು ಗಾಯಗೊಂಡಿರುವ ಯುವಕನ ಕುಟುಂಬಸ್ಥರು ಸ್ಪರ್ಧೆ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಮೈಸೂರು ತಾಲೂಕಿನ ಹೊಸಹಳ್ಳಿ ಗ್ರಾಮದ ರವಿ ಎಂಬಾತನ ತಲೆ ಮೇಲೆ ಎತ್ತಿನ ಗಾಡಿ ಹರಿದು , ತೀವ್ರವಾಗಿ ಗಾಯಗೊಂಡಿದ್ದಾನೆ. ಈತನನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸದ್ಯ, ರವಿ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಘಟನೆಗೆ ಎತ್ತಿನ ಗಾಡಿ ಸ್ಪರ್ಧೆ ಆಯೋಜಕರ ನಿರ್ಲಕ್ಷ್ಯವೇ ಕಾರಣ ಎಂದು ರವಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ಓಟದ ಸ್ಪರ್ಧೆಯಲ್ಲಿ ಎತ್ತಿನಗಾಡಿ ಹರಿದು ಇಬ್ಬರಿಗೆ ಗಂಭೀರ ಗಾಯ
ಗಾಯಾಳು ರವಿ ನರಸೀಪುರ ಪಟ್ಟಣದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ಮಧ್ಯಾಹ್ನ ಮನೆಗೆ ಹೋಗಬೇಕಾದರೆ ಜನ ಸೇರಿರುವುದನ್ನು ನೋಡಿ ಸ್ಥಳಕ್ಕೆ ಸ್ಪರ್ಧೆ ನೋಡಲು ಹೋಗಿದ್ದನಂತೆ. ಈ ವೇಳೆ ಎತ್ತಿನ ಗಾಡಿ ನುಗ್ಗಿ ಬಂದು ಅವಘಡ ನಡೆದಿದೆ. ಘಟನೆಗೆ ಸ್ಪರ್ಧೆ ಆಯೋಜಕರು ವಿಷಾದ ವ್ಯಕ್ತಪಡಿಸಿದ್ದಾರೆ. ನಾವು ಎಲ್ಲಾ ರೀತಿಯ ಅನುಮತಿ ತೆಗೆದುಕೊಂಡು ಸ್ಪರ್ಧೆ ಆಯೋಜನೆ ಮಾಡಿದ್ದೆವು, ಪೊಲೀಸರು ಅನುಮತಿ ಕೊಟ್ಟಿದ್ದರು. ಆದರೆ, ಇಷ್ಟು ದೊಡ್ಡ ಅವಘಡ ನಡೆದಿರುವುದು ತಡವಾಗಿ ಗೊತ್ತಾಯಿತು ಎಂದು ಹೇಳಿದ್ದಾರೆ.