ಮೈಸೂರು : ನಾಡಹಬ್ಬ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಿರುವ ಹಿನ್ನೆಲೆ, ಗಜಪಡೆಗೆ ವೀರನಹೊಸಹಳ್ಳಿಯ ಆಂಜನೇಯ ದೇವಾಲಯದಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸುವ ಮೂಲಕ ಸರಳ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆ, ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಗಜಪಯಣದ ಜವಾಬ್ದಾರಿಯನ್ನು ಔಪಚಾರಿಕವಾಗಿ ಹಮ್ಮಿಕೊಂಡಿದೆ.
ಅಕ್ಟೋಬರ್ 1ರ ಗುರುವಾರ ಬೆಳಗ್ಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ 5 ಆನೆಗಳು ಮೈಸೂರಿಗೆ ಪ್ರಯಾಣ ಬೆಳಸಲಿವೆ.
ದಸರಾ ಹಬ್ಬಕ್ಕೂ ಮುಂಚಿತ ನಡೆಯುವ ಈ ಗಜಪಯಣ, ಪ್ರತಿ ವರ್ಷವೂ ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳೊಂದಿಗೆ ಗಣ್ಯರ ಹಾಗೂ ಜನಪ್ರತಿನಿಧಿಗಳೊದಿಗೆ ಸಂಪನ್ನಗೊಳ್ಳುತ್ತಿತ್ತು. ಆದರೆ, ಈ ವರ್ಷ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೆರವಣಿಗೆಗೆ ಅವಕಾಶ ಇಲ್ಲ ಹಾಗೂ ಜನಪ್ರತಿನಿಧಿಗಳು, ಗಣ್ಯರು ಸೇರಿ ಯಾರನ್ನು ಆಹ್ವಾನಿಸಿಲ್ಲ.
ಈ ಬಾರಿ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ವಿಕ್ರಮ್, ವಿಜಯ, ಗೋಪಿ ಮತ್ತು ಕಾವೇರಿ ಆನೆಗಳನ್ನು ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ನಂತರ ಅಕ್ಟೋಬರ್ 2 ರಂದು ಅರಮನೆಯ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ. ದಸರಾದಲ್ಲಿ ಭಾಗವಹಿಸಲಿರುವ ಆನೆಗಳ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಮಾವುತ ಮತ್ತು ಕಾವಾಡಿಗರದ್ದಾಗಿದೆ ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದ್ದಾರೆ.