ಮೈಸೂರು : ಆನೆ ದಂತದಲ್ಲಿ ಕಲಾಕೃತಿ ಕೆತ್ತನೆ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಮೂವರನ್ನು ಜಿಲ್ಲೆಯ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಅರೆಸ್ಟ್ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ನಿವಾಸಿ ಶಿವದಾಸ್(55), ನಾಯ್ಡು ನಗರದ ನಿವಾಸಿಗಳಾದ ಮನೋಹರ್ (40) ಹಾಗೂ ಸುಮಂತ್(26) ಎಂಬುವರು ಬಂಧಿತರು. ಎರಡು ಬೃಹತ್ ಹಾಗೂ ಒಂದು ಸಣ್ಣ ಆನೆ ದಂತದಲ್ಲಿ ಕಲಾಕೃತಿ ಕೆತ್ತನೆ ಮಾಡಿ ಮಾರಾಟ ಮಾಡಲು ಹೋಗುತ್ತಿದ್ದ ಮಾಹಿತಿಯನ್ನು ತಿಳಿದ ಸಂಚಾರಿ ಅರಣ್ಯ ದಳದ ಸಿಬ್ಬಂದಿ ದಾಳಿ ಮಾಡಿ, ದಂತದ ಕಲಾಕೃತಿ, ಆಲ್ಟೋ ಕಾರ್, ಬೈಕ್ ವಶಕ್ಕೆ ಪಡೆದಿದ್ದಾರೆ.
ಎರಡು ಬೃಹತ್ ದಂತಗಳಲ್ಲಿ ಆಕರ್ಷಕ ಕಲಾಕೃತಿಗಳನ್ನು ಕೆತ್ತಲಾಗಿದ್ದು, ಸಣ್ಣ ದಂತದಲ್ಲಿ ಕೊಳಲು ನುಡಿಸುತ್ತಿರುವ ಕೃಷ್ಣನ ಕಲಾಕೃತಿಯ ಕೆತ್ತನೆ ಮಾಡಲಾಗಿದೆ. ಇನ್ನೂ ಎರಡು ದಂತಗಳು ಒಂದೂವರೆ ಅಡಿ ಎತ್ತರವಾಗಿದ್ದು, ಸಣ್ಣ ದಂತ ಒಂದು ಅಡಿ ಎತ್ತರವಿದೆ.
ನುರಿತ ಕಲಾವಿದರೆ ದಂತದಲ್ಲಿ ಆಕರ್ಷಕ ಕೆತ್ತನೆ ಮಾಡಿದ್ದಾರೆ. ನುರಿತ ಕಲಾವಿದರ ಶೋಧಕ್ಕೆ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಲೆ ಬೀಸಿದ್ದಾರೆ. ಅರಣ್ಯ ಸಂಚಾರಿ ದಳದ ಡಿಸಿಎಫ್ ಎ ಟಿ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.