ಮೈಸೂರು: ಕೊರೊನಾ ವೈರಸ್ ಸಾಂಸ್ಕೃತಿಕ ನಗರಿ ಮೈಸೂರನ್ನು ಸ್ತಬ್ಧಗೊಳಿಸಿತ್ತು. ಆದರೆ ಇದೀಗ 'ಕೊರೊನಾ ಮುಕ್ತ ಮೈಸೂರು' ಎಂದು ಘೋಷಿಸಲಾಗಿದೆ. ಈ ಶುಭ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮೂರು ನೋಡುವ ಸೌಭಾಗ್ಯ ಸಿಕ್ಕಿದೆ.
ಅಶೋಕಪುರಂ ರೈಲ್ವೆ ನಿಲ್ದಾಣದ ಮೈದಾನದಲ್ಲಿ 1,520 ಮುಂದಿಯ ದಾಖಲಾತಿಗಳನ್ನು ಪರಿಶೀಲಿಸಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ, ಟೆಕೆಟ್ಗಳನ್ನು ನೀಡಲಾಯಿತು. ನಂತರ ತೆರಳುವ ಪ್ರತಿಯೊಬ್ಬರಿಗೆ ಒಂದು ಪೊಟ್ಟಣ ಆಹಾರ ಹಾಗೂ ಒಂದು ಲೀಟರ್ ನೀರಿನ ಬಾಟಲ್ ನೀಡಿ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಉತ್ತರಪ್ರದೇಶ, ಗೋರಖ್ ಪುರಕ್ಕೆ ತೆರಳುವ ರೈಲಿನಲ್ಲಿ ಕಳುಹಿಸಲಾಯಿತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು, ನಮ್ಮ ರಾಜ್ಯ ಸರ್ಕಾರ, ಉತ್ತರ ಪ್ರದೇಶ ಸರ್ಕಾರ ಹಾಗೂ ರೈಲ್ವೆ ಇಲಾಖೆ ಚರ್ಚೆ ನಡೆಸಿ, ಮೈಸೂರಿನಲ್ಲಿ ವಾಸವಿದ್ದ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕಳಿಸಲಾಗುತ್ತಿದೆ. ಎರಡೂವರೆ ದಿನದ ನಂತರ ರೈಲು ಗೋರಖ್ ಪುರ ತಲುಪಲಿದೆ. ಕಾರ್ಮಿಕರು ಟಿಕೆಟ್ ಪಡೆದು ತೆರಳಿದ್ದಾರೆ. ನಾವು ಯಾರಿಗೂ ಹೋಗಿ ಅಂತ ಹೇಳಿಲ್ಲ, ಬನ್ನಿ ಎಂದೂ ಹೇಳಿಲ್ಲ. ಅವರ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದೀವಿ ಎಂದರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ನಂಜನಗೂಡಿನಲ್ಲಿ 9, ಬನ್ನೂರಿನಲ್ಲಿ 1 ಕಂಟೇನ್ಮೆಂಟ್ ಝೋನ್ಗಳಿವೆ. ಇವುಗಳನ್ನು ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಸಡಿಲಿಕೆ ಮಾಡಲಾಗಿದೆ. ನಂಜನಗೂಡು- ಗುಂಡ್ಲುಪೇಟೆ ಮಾರ್ಗವಾಗಿ ವಾಹನಗಳ ಸಂಚಾರ ವ್ಯವಸ್ಥೆ ಇರುವುದಿಲ್ಲ ಎಂದರು.