ಮೈಸೂರು : ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಸಲೀಸಾಗಿ ಕದ್ದು ಪರಾರಿಯಾಗಿರುವ ಘಟನೆ ನಗರದ ವಿವೇಕಾನಂದ ಸರ್ಕಲ್ ಬಳಿ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕ್ಷಣ ಮಾತ್ರದಲ್ಲೇ ಬೈಕ್ ಕದ್ದ ಕಳ್ಳ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕಳೆದ ತಿಂಗಳು 27 ರಂದು ನಗರದ ವಿವೇಕಾನಂದ ವೃತ್ತದಿಂದ ಶ್ರೀ ರಾಂಪುರ ರಸ್ತೆಯ ಕಡೆ ಹೋಗುವ ಲಕ್ಷ್ಮಿ ಭಂಡಾರ್ ಅಂಗಡಿಯ ಮುಂಭಾಗ ಅಂಗಡಿ ಮಾಲೀಕರಾದ ರಾಕೇಶ್ ತಮ್ಮ ಬೈಕ್ ನಿಲ್ಲಿಸಿದ್ದರು. ಅದೇ ದಿನ ಮುಂಜಾನೆ ಬೈಕ್ನಲ್ಲಿ ಬಂದ ಕಳ್ಳರಿಬ್ಬರಲ್ಲಿ ಹಿಂಬದಿ ಕುಳಿತ್ತಿದ್ದ ಕಳ್ಳ ಇಳಿದು ತಾನು ತಂದಿದ್ದ ನಕಲಿ ಕೀ ಬಳಸಿ ಸಲೀಸಾಗಿ ಬೈಕ್ ಅನ್ನು ಮಿಂಚಿನ ವೇಗದಲ್ಲಿ ಎಗರಿಸಿ ಪರಾರಿಯಾಗಿದ್ದರು.
ಇತ್ತ ಅಂಗಡಿ ಮಾಲೀಕ ರಾಕೇಶ್ ಬೆಳಗ್ಗೆ ಎದ್ದು ಬೈಕ್ ಇಲ್ಲದ್ದನ್ನು ನೋಡಿ ಗಾಬರಿಗೊಂಡಿದ್ದಾರೆ. ಬಳಿಕ ತಮ್ಮ ಅಂಗಡಿಯಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದಾಗ, ಬೈಕ್ ಅನ್ನು ಕಳ್ಳರು ಕದ್ದೊಯ್ದಿರುವುದು ಕಂಡು ಬಂದಿದೆ. ಸಿಸಿಟಿವಿಯಲ್ಲಿ ಸರೆಯಾದ ದೃಶ್ಯವನ್ನು ತೆಗೆದುಕೊಂಡು ಸಮೀಪದ ಠಾಣೆಗೆ ದೂರು ನೀಡಲು ಹೊರಡುವ ಸಂದರ್ಭದಲ್ಲಿ, ಸ್ಥಳೀಯ ಅಶೋಕಪುರಂ ಪೋಲಿಸ್ ಠಾಣೆಯ ಪೋಲಿಸರು ಬೈಕ್ ಕಳ್ಳನನ್ನು ಬಂಧಿಸಿ ಬೈಕ್ ಅನ್ನ ವಶಕ್ಕೆ ಪಡೆದಿರುವ ಮಾಹಿತಿ ಪೋಲಿಸ್ ಠಾಣೆಯಿಂದ ರಾಕೇಶ್ ಅವರಿಗೆ ತಿಳಿದಿದೆ. ಮತ್ತೊದೆಡೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ದೃಷ್ಟಿಯಿಂದ ಆತನ ಮಾಹಿತಿಯನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಫ್ಲೈಯಿಂಗ್ ಸ್ಕ್ವಾಡ್ನಿಂದ 19 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ವಶ: ವಿಜಯನಗರ ಜಿಲ್ಲೆಯ ವಿವಿಧೆಡೆ ನಗದು, ಬಂಗಾರ ವಶ
ಕಳುವಾದ 15 ಮೊಬೈಲ್ಗಳು ಪತ್ತೆ : ಮೈಸೂರು ನಗರ ವ್ಯಾಪ್ತಿಯ ವಿವಿಧ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಮೊಬೈಲ್ ಕಳುವಿನ ಬಗ್ಗೆ ಆನ್ ಲೈನ್ ಮೂಲಕ ಕೆಎಸ್ಬಿ ಅಪ್ಲಿಕೇಶನ್ನಲ್ಲಿ ಸಾರ್ವಜನಿಕರು ಇ ಲಾಸ್ಟ್ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರದ ಸೆನ್ ಪೋಲಿಸ್ ಠಾಣೆಯಿಂದ ಪರಿಶೀಲನೆ ನಡೆಸಿ ಕಳೆದ ಒಂದು ತಿಂಗಳಲ್ಲಿ ಕಳವಾದ ಸುಮಾರು 3.50.000 ಮೌಲ್ಯದ 15 ಮೊಬೈಲ್ಗಳನ್ನು ಪತ್ತೆ ಹಚ್ಚಿದ್ದು, ಈ ಮೊಬೈಲ್ಗಳನ್ನು ಮೈಸೂರು ನಗರ ಪೋಲಿಸ್ ಆಯುಕ್ತ ರಮೇಶ್ ಬಾನೋತ್ ಅವರು, ಮಾಲೀಕರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಬಾನೋತ್ ಅವರು ಮೈಸೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಅನ್ನು ಕಳೆದುಕೊಂಡರೆ, ಅದರ ಪತ್ತೇಗಾಗಿ ಸಿ ಇ ಐ ಆರ್ ಪೋರ್ಟಲ್ ಸಹಾಯ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಮತದಾರರಿಗೆ ಹಂಚಲು ಫುಡ್ ಕಿಟ್ ಸಂಗ್ರಹ ಆರೋಪ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಎಫ್ಐಆರ್