ಮೈಸೂರು : ಮೈಸೂರು ಅರಮನೆಯಲ್ಲಿ ಮಹಾರಾಜರಿಗೇ ಸ್ವಿಮ್ಮಿಂಗ್ ಪೂಲ್ ಇಲ್ಲ, ಇನ್ನೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಿವಾಸಕ್ಕೆ ಏಕೆ ಬೇಕು ಎಂದು ಮಾಜಿ ಸಚಿವ ಎ.ಮಂಜು ಜಿಲ್ಲಾಧಿಕಾರಿಗಳ ವರ್ತನೆಯನ್ನು ಪ್ರಶ್ನೆ ಮಾಡಿದ್ದಾರೆ.
ಇಂದು ಜಲದರ್ಶನಿ ಅತಿಥಿಗೃಹದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೊದಲು ಮೈಸೂರಿನ ಜಿಲ್ಲಾಧಿಕಾರಿ ಜನ ಸೇವಕರು ಎಂದು ತಿಳಿದುಕೊಳ್ಳಲಿ. ಜೊತೆಗೆ ನಾ ಮಾಡಿದ್ದೇ ಸರಿ, ನನಗೆ ಎಲ್ಲಾ ಗೊತ್ತು ಎನ್ನುವ ಸ್ವಭಾವ ಬಿಡಬೇಕು ಎಂದು ಹರಿಹಾಯ್ದರು.
ಮೈಸೂರು ಮಹಾರಾಜರು ಇದ್ದ ಅರಮನೆಯಲ್ಲಿ ಈಜುಕೊಳ ಇಲ್ಲ. ಜಿಲ್ಲಾಧಿಕಾರಿ ನಿವಾಸಕ್ಕೆ ಏಕೆ ಬೇಕು, ಕೊರೊನಾ ಸಂಕಷ್ಟ ಕಾಲದಲ್ಲಿ ಸಾರ್ವಜನಿಕರ ಹಣ ಏಕೆ ಬೇಕು ಎಂದು ಪ್ರಶ್ನೆ ಮಾಡಿದ ಎ.ಮಂಜು, ಜಿಲ್ಲಾಧಿಕಾರಿಗಳ ಮನೆಯ ಕೆಲಸ ಹಾಗೂ ಮಕ್ಕಳಿಗೆ ಪಾಠ ಹೇಳಲು 30ಕ್ಕೂ ಹೆಚ್ಚು ಮಂದಿ ಸರ್ಕಾರಿ ನೌಕರರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಹಾಸನದಲ್ಲಿ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಸಚಿವರ ಎದುರೇ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಿದ್ದರು ಎಂದು ರೋಹಿಣಿ ಸಿಂಧೂರಿ ಅವರ ವರ್ತನೆ ವಿವರಿಸಿದರು.
ಮೈಸೂರಿನಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ನಡುವಿನ ಜಟಾಪಟಿಯನ್ನು ಸರ್ಕಾರ ಮಧ್ಯ ಪ್ರವೇಶಿಸಿ ಬಗೆಹರಿಸಬೇಕು. ಈ ಕೆಲಸವನ್ನು ಇನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.