ಮೈಸೂರು: ''ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಈ ಹಿನ್ನೆಲೆಯಲ್ಲಿ ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ಮಾಡುವುದಿಲ್ಲ. ಬದಲಾಗಿ ಮೈಸೂರು ನಗರದ ಟೌನ್ಹಾಲ್ನಲ್ಲಿ ಸಭೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿದ್ದು, ಅಲ್ಲಿಯೇ ಮಹಿಷಾ ದಸರಾ ಆಚರಣೆ ಮಾಡುತ್ತೇವೆ'' ಎಂದು ಮಹಿಷಾ ದಸರಾ ಸಮಿತಿಯ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್ ಸ್ಪಷ್ಟಪಡಿಸಿದರು.
ಈಟಿವಿ ಭಾರತಕ್ಕೆ ಸಂದರ್ಶನ ನೀಡಿದ ಅವರು, ''ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟದಲ್ಲಿ ಇರುವ ಮಹಿಷಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಮಹಿಷಾ ದಸರಾ ಆಚರಣೆ ಮಾಡುತ್ತೇವೆ ಎನ್ನುವ ಮಹಿಷಾ ದಸರಾ ಸಮಿತಿಯ ನಿರ್ಧಾರಕ್ಕೆ ಹಾಗೂ ಚಾಮುಂಡಿ ಚಲೋ ಮಾಡುತ್ತೇವೆ ಎಂಬ ಸಂಸದರ ಜಾಥಾಕ್ಕೆ ಪೋಲಿಸ್ ಇಲಾಖೆ ಅನುಮತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿದ್ದ ಮಹಿಷಾ ದಸರಾ ಆಚರಣೆಯನ್ನು ಅಲ್ಲಿ ಮಾಡುವುದಿಲ್ಲ. ಬದಲಿಗೆ ಟೌನ್ ಹಾಲ್ನಲ್ಲಿ ಮಹಿಷಾ ದಸರಾ ಆಚರಣೆ ಮಾಡುತ್ತೇವೆ'' ಎಂದರು.
''ಟೌನ್ ಹಾಲ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ನಗರ ಪೋಲಿಸ್ ಕಮಿಷನರ್ ಕಚೇರಿಯಿಂದ ಅನುಮತಿ ಪಡೆಯಲಾಗಿದ್ದು, ಶಾಂತಿಯುತವಾಗಿ ಕಾರ್ಯಕ್ರಮ ಮಾಡುತ್ತೇವೆ. ನಮಗೆ ಕಾನೂನು ಹಾಗೂ ಪೊಲೀಸ್ ಇಲಾಖೆ ಮೇಲೆ ಗೌರವವಿದ್ದು, ಆದ್ದರಿಂದ ನಾಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಿಸುವುದಿಲ್ಲ. ಬದಲಿಗೆ ನಮ್ಮ ಹೆಸರಿಗೆ ಕಳಂಕ ತರಲು ಯಾರಾದರೂ ಅಹಿತಕರ ಘಟನೆಗೆ ಕುಮ್ಮಕ್ಕು ನೀಡಿದರೆ, ನಾವು ಜವಾಬ್ದಾರರಲ್ಲ'' ಎಂದು ಮಹಿಷಾ ದಸರಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಅವರಿಂದ ಸ್ವಾಗತ: ಇದಕ್ಕೂ ಮುನ್ನ, ಮಹಿಷಾ ದಸರಾ ಆಚರಣೆ ಮಾಡಿದರೆ, ಚಾಮುಂಡಿ ಚಲೋ ಚಳವಳಿ ಮಾಡುತ್ತೇವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ನಗರ ಪೊಲೀಸ್ ಕಮಿಷನರ್ ಎರಡೂ ಮನವಿಗಳಿಗೆ ಅನುಮತಿಯನ್ನು ನಿರಾಕರಿಸಿದ್ದರು. ನಗರ ಪೊಲೀಸ್ ಕಮಿಷನರ್ ಆದೇಶವನ್ನು ಸಂಸದ ಪ್ರತಾಪ್ ಸಿಂಹ ಸ್ವಾಗತಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಣದಲ್ಲಿ ಲೈವ್ ಬಂದು ಸ್ವಾಗತ ಕೋರಿದ್ದಾರೆ. ಈ ವೇಳೆ ಮಾತನಾಡಿದ ಅವರು, ಒಂದು ವೇಳೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆದರೆ, ಅಕ್ಟೋಬರ್ 15 ರಂದು ನಡೆಯುವ ನಾಡಹಬ್ಬ ಉದ್ಘಾಟನಾ ವೇದಿಕೆಯಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟ ಚಲೋ, ಮಹಿಷಾ ದಸರಾ ಆಚರಣೆಗೆ ಅನುಮತಿ ನಿರಾಕರಣೆ: ಪ್ರತಾಪ್ ಸಿಂಹ ಅಭಿನಂದನೆ