ಮೈಸೂರು: ಸಿಡಿ ಆರೋಪದ ಬಗ್ಗೆ ಡಿ.ಕೆ. ಶಿವಕುಮಾರ್ ಸಮರ್ಥವಾಗಿ ಉತ್ತರ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಿಡಿಗಳಿವೆ. ಚುನಾವಣೆ ಸಂದರ್ಭದಲ್ಲಿ ಇಂತಹ ಸಿಡಿಗಳು ಸಾಕಷ್ಟು ಬರುತ್ತವೆ. ಸಿಡಿ ವಿಚಾರ ಇಟ್ಟುಕೊಂಡು ಡಿಕೆಶಿ ಬ್ಲ್ಯಾಕ್ ಮೇಲ್ ಮಾಡಲ್ಲ. ಆದರೆ, ಬಿಜೆಪಿಯವರು ಬ್ಲ್ಯಾಕ್ ಮೇಲ್ ಮಾಡಬಹುದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು. ಇಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಗಳನ್ನು ಸಿಬಿಐ ತನಿಖೆಗೆ ಕೊಡಲು ಬರುವುದಿಲ್ಲ. ಟಿಕೆಟ್ ಘೋಷಣೆ ಆಗುವವರೆಗೂ ಸಿದ್ದರಾಮಯ್ಯ ಕೂಡ ಅಕಾಂಕ್ಷಿಯೇ. ಎಐಸಿಸಿ ಟಿಕೆಟ್ ಘೋಷಣೆ ಮಾಡುವ ಮುನ್ನ ಎಲ್ಲರೂ ಆಕಾಂಕ್ಷಿಗಳೇ ಎಂದರು.
ಎರಡು ಕ್ಷೇತ್ರಗಳಲ್ಲಿ ಯಾರು ಆಕಾಂಕ್ಷಿಗಳಿಲ್ಲ: ಈ ಬಾರಿ ಎರಡು ಕ್ಷೇತ್ರಗಳಲ್ಲಿ ಯಾರು ಟಿಕೇಟ್ ಆಕಾಂಕ್ಷಿಗಳು ಇಲ್ಲ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಯಾರು ಯೋಚನೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಪರಮೇಶ್ವರ್ ರಾಜೀನಾಮೆ ಕೊಟ್ಟಿಲ್ಲ. ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ನ ಬಣ ರಾಜಕಾರಣದ ಬಗ್ಗೆ ಹೇಳಿದ್ದೇನು?: ನಮ್ಮಲ್ಲಿ ಸಾವಿರಾರು ಬಣಗಳು ಇವೆ, ಸಣ್ಣ ಸಣ್ಣ ನದಿಗಳು ಸರೋವರ ಸೇರುತ್ತವೆ. ನಂತರ ಸಮುದ್ರ ಸೇರುತ್ತವೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಕಾಂಗ್ರೆಸ್ ಮಹಾಸಾಗರ ಇದ್ದಂತೆ ಎಂದ ಅವರು, ನನಗೆ ಯಾವುದೇ ಅಸಮಾಧಾನ ಇಲ್ಲ. ಕೇಂದ್ರ ಚುನಾವಣಾ ಸಮಿತಿಯಲ್ಲಿ ರಾಜ್ಯದಿಂದ ನಾನೊಬ್ಬನೇ ಸದಸ್ಯ. ನಾನು ಸಕ್ರಿಯವಾಗಿ ಕಾಂಗ್ರೆಸ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಬಣ ರಾಜಕೀಯ ಕಾಂಗ್ರೆಸ್ನಲ್ಲಿ ಇಲ್ಲ, ಯಾರ್ಯಾರಿಗೆ ಅರ್ಹತೆ ಇದೆಯೋ ಅವರಿಗೆ ಟಿಕೆಟ್ ಸಿಗುತ್ತದೆ ಎಂದರು.
ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್: ಮೂಲ ಕಾಂಗ್ರೆಸ್ಸಿಗರನ್ನ ಕಾಯುವುದೇ ನನ್ನ ಕೆಲಸ. ನಾನು ಮತ್ತು ಚಾಮರಾಜ ಕ್ಷೇತ್ರದ ಮಾಜಿ ಎಂಎಲ್ಎ ವಾಸು ಮೂಲ ಕಾಂಗ್ರೆಸ್ಸಿಗರು ಯಾರಿಗೂ ಯಾರು ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ. ವಾಸು ಅವರಿಗೆ ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ವಾಸು ಬಲಿಷ್ಠ ಅಭ್ಯರ್ಥಿ, ಅವರ ಹೆಸರು ಮೊದಲ ಪಟ್ಟಿಯಲ್ಲೇ ಇರುತ್ತದೆ. ಅದೇ ರೀತಿ ಶಾಸಕ ತನ್ವೀರ್ ಸೇಠ್ ಅನೇಕ ಬಾರಿ ಶಾಸಕರಾಗಿದ್ದರು. ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರ ಬೇರು ಕಾಂಗ್ರೆಸ್ನಲ್ಲಿ ಇದೆ. ಅವರು ಮೂಲ ಕಾಂಗ್ರೆಸ್ನವರೇ ಎಂದ ವೀರಪ್ಪ ಮೊಯ್ಲಿ, ರಾಜ್ಯದಲ್ಲಿ ಸಿದ್ದರಾಮಯ್ಯ ಬಣ ಎಂಬುವುದಿಲ್ಲ. ಎಲ್ಲವೂ ಕಾಂಗ್ರೆಸ್ ಬಣವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದರು.
ಪರಮೇಶ್ವರ್ ಪ್ರಾಣಾಳಿಕೆ ಸಮಿತಿಗೆ ರಾಜೀನಾಮೆ ನೀಡಿಲ್ಲ: ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಅವರು ಪ್ರಾಣಾಳಿಕೆ ಸಮಿತಿಗೆ ರಾಜೀನಾಮೆ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇದೇ ವೇಳೆ ಸ್ಪಷ್ಟಪಡಿಸಿದರು. ಪ್ರದೇಶವಾರು ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಡಾ.ಜಿ.ಪರಮೇಶ್ವರ್ ಅವರ ಶ್ರಮವು ಇದೆ. ಹೀಗಿರುವಾಗ ಅವರು ರಾಜೀನಾಮೆ ಕೊಟ್ಟಿಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಅದೆಲ್ಲ ಸುಳ್ಳು: ಜಿ ಪರಮೇಶ್ವರ್ ಸ್ಪಷ್ಟನೆ