ಮೈಸೂರು: ಕೋವಿಡ್ ವಾರ್ ರೂಂನ ನಿರ್ಲಕ್ಷ್ಯದಿಂದ ಪಾಲಿಕೆಯಲ್ಲಿ ಫಾಗಿಂಗ್ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕನೊಬ್ಬ ಕೋವಿಡ್ಗೆ ಬಲಿಯಾಗಿದ್ದಾನೆ ಎಂದು ಪೌರಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ವಿನೋದ್ ಕುಮಾರ್( 28) ಕೋವಿಡ್ಗೆ ಬಲಿಯಾದ ಪೌರಕಾರ್ಮಿಕ. ಈತನಿಗೆ ವೆಂಟಿಲೇಟರ್ ಬೆಡ್ ಸಿಗದೇ ಸಾವನ್ನಪ್ಪಿದ್ದು, ಇದಕ್ಕೆ ಕೋವಿಡ್ ವಾರ್ ರೂಂನ ನಿರ್ಲಕ್ಷ್ಯವೇ ಕಾರಣ ಎಂದು ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಕಳೆದ 4 ದಿನಗಳಿಂದ ಕೋವಿಡ್ ವಾರ್ ರೂಂ ಲ್ಯಾಂಡ್ ಲೈನ್ ಹಾಗೂ ವ್ಯಾಟ್ಸಪ್ ನಂಬರ್ಗೆ ಸತತ ಮಾಹಿತಿ ನೀಡಿದರು, ಇಲ್ಲಿಯವರೆಗೆ ನಮಗೆ ಬೆಡ್ ಸಿಕ್ಕಿಲ್ಲ. ಇಂದಿಗೂ ಸಹ ವಾರ್ ರೂಂ ಸರಿಯಾಗಿ ವೆಂಟಿಲೇಟರ್ ಬೆಡ್ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಬೆಡ್ ಸಿಕ್ಕಿದ್ದರೆ ವಿನೋದ್ ಕುಮಾರ್ ಉಳಿಯುತ್ತಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಮಾಡುವುದಿಲ್ಲ, ಕೆಲಸ ನಿಲ್ಲಿಸುತ್ತೇವೆ : ಕೊರೊನಾ ವಾರಿಯರ್ಗಳಗೇ ಬೆಡ್ ಇಲ್ಲದೆ, ವಿಶೇಷ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಯಾರು? ನಾಳೆ ಸಭೆ ಸೇರಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಳುತ್ತೇವೆ. ಇಲ್ಲದಿದ್ದರೆ ಗುರುವಾರದಿಂದ 2,500 ಜನ ಪೌರಕಾರ್ಮಿಕರು ಪ್ರತಿಭಟನೆ ಮಾಡುವುದಿಲ್ಲ ಬದಲಾಗಿ ಯಾರೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪೌರಕಾರ್ಮಿಕ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.