ಮೈಸೂರು: ಒಕ್ಕಲಿಗ ಸಮುದಾಯದ ಮುಖಂಡರು ಭಾವುಕರಾಗಿ ಯೋಚನೆ ಮಾಡುವುದಕ್ಕಿಂತ ಸತ್ಯ ಏನೆಂದು ಯೋಚಿಸಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮನವಿ ಮಾಡಿದ್ದಾರೆ.
ಅರಮನೆಯ ಆವರಣದಲ್ಲಿ ಮಾವುತರು ಹಾಗೂ ಕಾವಾಡಿಗರ ಉಪಹಾರ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ನಡೆದಿದ್ದರೆ ಮಾತ್ರ ಭಯ ಬೀಳಬೇಕು. ಪ್ರಾಮಾಣಿಕವಾಗಿದ್ದರೆ ಏಕೆ ಭಯ? ತನಿಖೆ ಬೇಡ ಎಂದರೆ ಹೇಗೆ? ಇದರಿಂದ ಸಾಮಾನ್ಯ ಜನರಿಗೂ ಅನುಮಾನ ಬರುತ್ತದೆ. ಅಕ್ರಮ ನಡೆದ ವಿಷಯಗಳನ್ನು ತನಿಖೆ ನಡೆಸಿದರೆ ಸೇಡಿನ ರಾಜಕೀಯ ಎನ್ನುತ್ತಾರೆ ಎಂದು ಕಾಂಗ್ರೆಸಿಗರಿಗೆ ಟಾಂಗ್ ಕೊಟ್ಟರು.
ನಾನೂ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಸಂವಿಧಾನಕ್ಕಿಂತ ಯಾರು ಮಿಗಿಲಲ್ಲ. ಹಾಗೇನಾದರೂ ಭಾವಿಸಿದರೆ ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ. ಒಕ್ಕಲಿಗ ಸುಮುದಾಯದ ಮುಖಂಡರು ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ಸತ್ಯ ಏನೆಂದು ಯೋಚಿಸಿದರೆ ಗೊತ್ತಾಗುತ್ತದೆ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ಕಾಂಗ್ರೆಸ್ ಅವರು ಸಂವಿಧಾನದ ಅಡಿಯಿರುವ ಸಂಸ್ಥೆಗಳ ಮೂಲಕ ತನಿಖೆಯಾಗಬಾರದು ಎಂದು ಹೇಳಿದರೆ ಹೇಗೆ ಎಂದು ಸಿ. ಟಿ. ರವಿ ಪ್ರಶ್ನಿಸಿದರು.