ಮೈಸೂರು: ಖರಾಬು ಜಮೀನಿನಲ್ಲಿನ ತೆಂಗಿನ ಮರದಿಂದ ಎಳನೀರು ಕೀಳುವ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾರಾ ಮಾರಿ ನಡೆದು ಇಬ್ಬರಿಗೆ ಗಾಯವಾಗಿರುವ ಘಟನೆ ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಗದ್ದಿಗೆ ಗ್ರಾಮದ ನಿವಾಸಿಗಳಾದ ಉಯಿಲೇಗೌಡ ಹಾಗೂ ಮಹೇಶ್ ಎಂಬುವವರು ಎಳನೀರು ಕೀಳುವ ವಿಚಾರಕ್ಕೆ ಬಡಿದಾಡಿಕೊಂಡಿದ್ದಾರೆ. ಉಯಿಲೇಗೌಡರ ಜಮೀನು ಗದ್ದಿಗೆ ಮುಖ್ಯ ರಸ್ತೆ ಬಳಿ ಇದ್ದು, ಪಕ್ಕದಲ್ಲೇ ಇದ್ದ 33 ಗುಂಟೆ ಸರ್ಕಾರಿ ಜಮೀನು ಸೇರಿದಂತೆ ಮೂರುವರೆ ಎಕರೆ ತೆಂಗಿನ ತೋಟ ಮಾಡಿದ್ದರು. ಇವರ ಜಮೀನಿನ ಪಕ್ಕದಲ್ಲೆ ದೇವಮ್ಮ ಎಂಬುವವರ ಜಮೀನಿದ್ದು, ಸರ್ಕಾರಿ ಖರಾಬು ಜಾಗ ತಮಗೆ ಸೇರಬೇಕೆಂದು ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜೊತೆಗೆ ಎರಡು ಗುಂಪಿನ ನಡುವೆ ಗಲಾಟೆ ಸಹ ನಡೆದಿತ್ತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ದೇವಮ್ಮ ಪುತ್ರ ಮಹೇಶ್ ತನ್ನ ಸ್ನೇಹಿತರೊಂದಿಗೆ ಜಮೀನಿಗೆ ಬಂದು ಉಯಿಲೇಗೌಡರು ಖರಾಬು ಜಾಗದಲ್ಲಿ ಬೆಳೆದಿದ್ದ ತೆಂಗಿನ ಮರದಿಂದ ಎಳನೀರು ಕೀಳಲು ಮುಂದಾಗಿದ್ದಾನೆ. ವಿಷಯ ತಿಳಿದ ಉಯಿಲೇಗೌಡ ತಡೆಯಲು ಬಂದಾಗ ಇಬ್ಬರಿಗೂ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಮಿಲಾಯಿಸಿದ್ದಾರೆ. ಈ ವೇಳೆ ಉಯಿಲೇಗೌಡರಿಗೆ ಎದೆ ಹಾಗೂ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಶ್ಗೂ ಗಾಯವಾಗಿದ್ದು ಈತನೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಇಬ್ಬರೂ ಪ್ರತ್ಯೇಕ ದೂರು ದಾಖಲಿಸಿದ್ಧರೆ.