ಮೈಸೂರು: ಮೈಸೂರು ಮಹಾರಾಜರ ಕಾಲದ ಕೆರೆಯೊಂದು ಸರಿಯಾದ ನಿರ್ವಹಣೆಯಿಲ್ಲದೇ ಮಲಿನಗೊಳ್ಳುತ್ತಿದ್ದು, ಪ್ರತಿವರ್ಷ ವಲಸೆ ಬರುತ್ತಿದ್ದ ವಿದೇಶಿ ಪಕ್ಷಿಗಳು ಕೂಡ ದೂರ ಉಳಿದು ಬಿಟ್ಟಿವೆ.
ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಸರ್ವೇ ನಂ.57ರಲ್ಲಿ 198 ಎಕರೆ 3 ಗುಂಟೆ ವಿಸ್ತೀರ್ಣ ಹೊಂದಿರುವ ಬೃಹತ್ ಕೆರೆ ಇದೆ. ಇದನ್ನು ಮೈಸೂರು ಮಹಾರಾಜರು ಉಳಿಸಿದ್ದರು. ಬಳಿಕ ಡಾ. ಎಚ್.ಸಿ. ಮಹದೇವಪ್ಪ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ತಾವು ಹುಟ್ಟಿ ಬೆಳೆದ ಊರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ, ಹದಿನಾರು ಕೆರೆಯನ್ನು ಅಭಿವೃದ್ಧಿಗೊಳಿಸಲು ಅನುದಾನ ಕೊಡಿಸಿದ್ದರು. ಆ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಗಾಗಿ ಗೇಟ್ಗಳನ್ನು ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಿ ಕೆರೆ ಸಂರಕ್ಷಣೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ಕೊಡಲಾಯಿತು.
ಆದರೆ, ಮಹದೇವಪ್ಪನವರು ಚುನಾವಣೆ ಸೋತಾಗ, ಕೆರೆಯ ಅಭಿವೃದ್ಧಿಯನ್ನೇ ಮರೆತರು. ಇದರಿಂದ ನಿಧಾನವಾಗಿ ಪಾಳು ಬೀಳುತ್ತಿದ್ದ ಕೆರೆಯಲ್ಲಿ ಗ್ರಾಮಸ್ಥರು ಪಾತ್ರೆ, ಬಟ್ಟೆ ತೊಳೆಯುವುದು, ಕಸ, ಕಡ್ಡಿ ಹಾಕುವುದರಿಂದ ಅನೈರ್ಮಲ್ಯಗೊಳ್ಳುತ್ತಿದೆ. ಜಾನುವಾರುಗಳು ಕುಡಿಯಲು ಇದೇ ಕೆರೆಯನ್ನು ಆಶ್ರಯಿಸುವುದರಿಂದ ಅವುಗಳ ಹೊಟ್ಟೆಗೆ ಕೊಳಕು ನೀರು ಹೋಗುತ್ತಿದೆ.
ಪ್ರಜ್ಞಾವಂತ ಗ್ರಾಮಸ್ಥರು ಕೆರೆ ಅನೈರ್ಮಲ್ಯವಾಗಿತ್ತಿರುವುದನ್ನು ತಪ್ಪಿಸಿ ಜಾನುವಾರುಗಳು ಹಾಗೂ ವಲಸೆ ಪಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.