ಮೈಸೂರು: ನೆರೆ ಹಾವಳಿಯಿಂದ ತತ್ತರಿಸಿರುವ ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರಂತೆ ನೋಡ್ತಿದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ಮೈಸೂರಿನ ರೈಲ್ವೆ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ತಮಿಳುನಾಡಿನಲ್ಲಿ ಪ್ರವಾಹ ಆಗಿದ್ದರೆ, ಅಲ್ಲಿಗೆ ಹೋಗಿ ನೋಡುತ್ತಿದ್ದರು. ಆದರೆ ಕರ್ನಾಟಕಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾವಣನಂತೆ ಕೆಲಸ ಮಾಡಲು ಹೊರಟ್ಟಿದ್ದಾರೆ. ರಾವಣನಿಗೆ 10 ತಲೆ, 20 ಕೈಗಳು ಇತ್ತು. ರಾವಣನಂತೆ ಯಡಿಯೂರಪ್ಪ ಪಾತ್ರ ಮಾಡದೇ, ಮಂತ್ರಿ ಮಂಡಲ ರಚನೆ ಮಾಡಿ ,ರಾಜ್ಯದ ವ್ಯವಸ್ಥೆ ಕಾಪಾಡಬೇಕಿದೆ ಎಂದು ಟೀಕಿಸಿದ್ರು.
ಮಂತ್ರಿಗಳು ಇಲ್ಲದೆ ತಮ್ಮ ಪಕ್ಷದ ಶಾಸಕರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿದ್ದಾರೆ. ಇದರಿಂದ ನೆರೆ ಸಂತ್ರಸ್ತರ ಕಾರ್ಯ ವಿಳಂಬವಾಗುತ್ತಿದೆ ಎಂದರು. ಮಳೆಯಿಂದ ಮೃತಪಟ್ಟವರಿಗೆ 5 ಲಕ್ಷ ಕೊಟ್ಟರೆ ಸಾಲುವುದಿಲ್ಲ, 25 ಲಕ್ಷ ನೀಡಬೇಕು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ 50 ಸಾವಿರ ಕೋಟಿ ಪರಿಹಾರ ನೀಡಬೇಕು ಹಾಗೂ ನರೇಂದ್ರ ಮೋದಿ ಕರ್ನಾಟಕಕ್ಕೆ ಬರಬೇಕು ಎಂದು ಒತ್ತಾಯಿಸಿದರು.