ಮೈಸೂರು: ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದಿಂದ ಚಾಮುಂಡೇಶ್ವರಿಯ ತೆಪ್ಪೋತ್ಸವ ಜರುಗಿತು. ಈ ಮೂಲಕ ನವರಾತ್ರಿಯ ಕೊನೆಯ ಕಾರ್ಯಕ್ರಮ ಮುಕ್ತಾಯವಾಯಿತು.
ಚಾಮುಂಡಿ ಬೆಟ್ಟದ ಪ್ರಸಿದ್ಧ ದೇವಿಕೆರೆಯಲ್ಲಿ ಚಾಮುಂಡೇಶ್ವರಿಯ ತೆಪ್ಪೋತ್ಸವಕ್ಕೆ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಳೆಯಿಂದ ತೆಪ್ಪೋತ್ಸವ ತಡವಾಗಿ ಅರಂಭವಾಯಿತು. ಕೆರೆಯ ಪಕ್ಕದಲ್ಲೇ ನಿಂತು ತೆಪ್ಪೋತ್ಸವಕ್ಕೆ ಚಾಲನೆ ನೀಡಿದ್ದರು ರಾಜವಂಶಸ್ಥರು. ಚಾಮುಂಡೇಶ್ವರಿಯ ಉತ್ಸವ ಮೂರ್ತಿ ತೆಪ್ಪದಲ್ಲಿ ದೇವಿಕೆರೆಯನ್ನು ಪ್ರದಕ್ಷಿಣೆ ಹಾಕಿದ ನಂತರ ಸಕಲ ಪೊಲೀಸ್ ಗೌರವದೊಂದಿಗೆ ಪೊಲೀಸ್ ಬ್ಯಾಂಡ್ನ ಹಿಮ್ಮೇಳನದೊಂದಿಗೆ ತೆಪ್ಪೋತ್ಸವ ಮುಕ್ತಾಯವಾಯಿತು. ಈ ಬಾರಿಯ ನವರಾತ್ರಿ ಮಹೋತ್ಸವ ಕೊನೆಯ ಕಾರ್ಯಕ್ರಮದೊಂದಿಗೆ ದಸರಾ ಯಶಸ್ವಿಯಾಗಿ ಮುಗಿಯಿತು.