ಮೈಸೂರು: ನಂಜನಗೂಡು ತಾಲೂಕಿನ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಭಾರ ಮುಖ್ಯ ಶಿಕ್ಷಕರೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ, ಡಿಡಿಪಿಐ ಹೆಚ್.ಕೆ. ಪಾಂಡು ಅವರು ಆದೇಶ ಹೊರಡಿಸಿದ್ದಾರೆ.
ಶಾಲಾ ಬಾಲಕಿಯರಿಗೆ ಪ್ರಭಾರ ಮುಖ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿತ್ತು. ಕೂಡಲೇ ಶಿಕ್ಷಕನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದರು. ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಹಾಗೂ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಮಕ್ಕಳು ತಿಳಿಸಿದ ಹಿನ್ನೆಲೆಯಲ್ಲಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಟಿ ಶಿವಲಿಂಗಯ್ಯ ದಿಢೀರ್ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದರು.
ಈ ಬಗ್ಗೆ ಶಿಕ್ಷಕನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ, ಪೋಕ್ಸೋ ಕಾಯ್ದೆ ಅಡಿ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪ್ರಾಪ್ತ ಶಾಲಾ ಮಕ್ಕಳಿಗೆ ಶಿಕ್ಷಕ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಾಗಿ, ಡಿಡಿಪಿಐ ಹೆಚ್.ಕೆ. ಪಾಂಡು ಅವರು ಪ್ರಭಾರ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್