ಮೈಸೂರು : ಐತಿಹಾಸಿಕ ಮಹತ್ವ ಪಡೆದಿರುವ ತಲಕಾಡು ಪಂಚಲಿಂಗ ದರ್ಶನಕ್ಕೆ ಇಂದಿನಿಂದ 16ನೇ ತಾರೀಖಿನವರೆಗೂ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ಬಾರಿ ಕಾರ್ತಿಕ ಮಾಸ, ವೃಶ್ಚಿಕ ಅಮವಾಸ್ಯೆ, ಸೋಮವಾರ ಕುಹಯೋಗ, ವಿಶಾಖ ನಕ್ಷತ್ರದ ಶುಭ ಲಗ್ನದಲ್ಲಿ ಈ ಮಹೋತ್ಸವ ಜರುಗುತ್ತದೆ. ಪಂಚಲಿಂಗ ದರ್ಶನ 3 ರಿಂದ 5, 7, 12, 13 ವರ್ಷಗಳ ಅಂತರದಲ್ಲಿ ಒಮ್ಮೆ ಬರುತ್ತದೆ.
ಇಂದಿನಿಂದ ಪೂಜಾ ಕೈಂಕರ್ಯಗಳು ಶುರುವಾಗಿದ್ದು, ಇಂದು ಸಂಜೆ 06:30ಕ್ಕೆ ವೈದ್ಯನಾಥೇಶ್ವರ ದೇವಾಲಯದ ಪ್ರಧಾನ ಅರ್ಚಕರು ದೇವಾಲಯದಲ್ಲಿ ದೀಪ ಹಚ್ಚುವ ಮೂಲಕ ಪಂಚಲಿಂಗ ದರ್ಶನ ಮಹೋತ್ಸವ ಆರಂಭವಾಗಲಿದೆ.
ಅಲಮೇಲಮ್ಮನ ಶಾಪಕ್ಕೆ ತಲಕಾಡು ಮರಳು : 'ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ನೀಡಿದ ಹಿನ್ನೆಲೆ, ತುಂಬಿ ಹರಿಯುವ ಕಾವೇರಿ ನದಿ ತಟದಲ್ಲಿ ದೇಗುಲಗಳ ಸುತ್ತಮುತ್ತ ಎತ್ತ ನೋಡಿದರೂ ಮರಳು ರಾಶಿ.
ಪಂಚಲಿಂಗ ದರ್ಶನದ ಸಂದರ್ಭದಲ್ಲಿ ಹೆಚ್ಚು ಮರಳು ತುಂಬಿರುವ ಪಾತಾಳೇಶ್ವರ, ವೈದ್ಯನಾಥೇಶ್ವರ ದೇವಾಲಯಗಳಲ್ಲಿ ಮರಳನ್ನು ತೆಗೆದು, ಶಿವಲಿಂಗಗಳನ್ನು ಪೂಜೆಗೆ ಅಣಿಗೊಳಿಸಲಾಗುತ್ತದೆ. ದೇವಸ್ಥಾನಗಳನ್ನು ಶುಚಿಗೊಳಿಸಿ, ಸುಣ್ಣ-ಬಣ್ಣ ಬಳಿದು ಸಿಂಗರಿಸಲಾಗಿದ್ದು, ದೀಪಾಲಂಕಾರದಿಂದ ದೇಗುಲಗಳು ಕಂಗೊಳಿಸುತ್ತಿವೆ.
ಓದಿ: ಐತಿಹಾಸಿಕ ತಲಕಾಡು ಪಂಚಲಿಂಗ ದರ್ಶನಕ್ಕೆ ಕ್ಷಣಗಣನೆ... ನಾಳೆ ವಿದ್ಯುಕ್ತ ಚಾಲನೆ
ಪಂಚಲಿಂಗ ದೇವಾಲಯದ ವಿಶೇಷತೆ : ಇಲ್ಲಿ 5 ಶಿವನ ಲಿಂಗಗಳು ಇದ್ದು, ಇದಕ್ಕಾಗಿ ಪಂಚಲಿಂಗೇಶ್ವರ ಎಂದು ಈ ಕ್ಷೇತ್ರವನ್ನು ಕರೆಯುವುದು ವಾಡಿಕೆ. ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನ ಮತ್ತು ವೈದ್ಯನಾಥೇಶ್ವರ ಎಂದು 5 ಲಿಂಗಗಳು ಇಲ್ಲಿ ಇವೆ.
ಈ ಐದು ದೇವರುಗಳ ಇತಿಹಾಸವೇನೆಂದ್ರೆ ಅರ್ಕೇಶ್ವರ ದೇವಾಲಯವು ಉತ್ತರವಾಹಿನಿ ಕಾವೇರಿ ತಟದಲ್ಲಿ ಸೂರ್ಯ (ಅರ್ಕ) ತಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡಿದ್ದರಿಂದ ಅರ್ಕೇಶ್ವರ ಹೆಸರಿನಲ್ಲಿ ಲಿಂಗ ರೂಪಿಯಾಗಿ ಶಿವನನ್ನು ಪೂಜಿಸಲಾಗುತ್ತದೆ.
ಪಾತಾಳೇಶ್ವರ ದೇವಾಲಯವು ತಪೋನಿರತ ವಾಸುಕಿ (ಸರ್ಪ)ಗೆ ಶಿವ ಪ್ರತ್ಯಕ್ಷನಾಗಿದ್ದರಿಂದ ವಾಸುಕೇಶ್ವರ ಉದಯವಾಯಿತು. ಸರ್ಪದೋಷ ನಿವಾರಣೆಗೆ ಈ ಕ್ಷೇತ್ರ ಪ್ರಸಿದ್ದಿ ಪಡೆದಿದೆ. ಮರಳೇಶ್ವರ ದೇವಾಲಯವೂ ಬ್ರಹ್ಮದೇವನೂ ಸರಸ್ವತಿಯನ್ನು ವಿವಾಹವಾಗಲು ಅನುಮತಿ ಕೋರಿ ಕಾವೇರಿ ನದಿಯಲ್ಲಿ ಮರಳಿನಲ್ಲಿ ಲಿಂಗ ಮಾಡಿ ಶಿವನನ್ನು ಪೂಜಿಸುತ್ತಾನೆ. ಅದಕ್ಕಾಗಿ ಮರಳೇಶ್ವರ ದೇವಾಲಯದಲ್ಲಿ ಶಿವ ನೆಲಸಿದ್ದಾನೆ.
ಮಲ್ಲಿಕಾರ್ಜುನ ದೇವಾಲಯವು ಮಧ್ಯಮ ಪಾಂಡವ ಅರ್ಜುನ ಇಲ್ಲಿ ಮಲ್ಲಿಕಾ ಪುಷ್ಪಗಳಿಂದ ಶಿವನನ್ನು ಪೂಜಿಸಿದ್ದು, ಮಲ್ಲಿಕಾರ್ಜುನ ಸ್ವಾಮಿಗೆ ತಲೆಯಲ್ಲಿ ಕಾಮಧೇನುವಿನ ಪಾದದ ಚಿಹ್ನೆ ಇದೆ. ಇಷ್ಟಾರ್ಥಗಳು ನೆರವೇರುತ್ತದೆ ಎಂಬುದು ನಂಬಿಕೆ.
ಕೊನೆಯ ದೇವರು ವೈದ್ಯನಾಥೇಶ್ವರ ದೇವಾಲಯ ವಶಿಷ್ಠ ಕುಲದ ಸೋಮದತ್ತ ಎಂಬ ಋಷಿ ತಪ್ಪಸ್ಸು ಮಾಡುವ ಸಂದರ್ಭದಲ್ಲಿ ಆನೆಯಿಂದ ಹತನಾಗುತ್ತಾನೆ, ನಂತರ ಶಿವ ಪ್ರತ್ಯಕ್ಷನಾಗಿ ಮೋಕ್ಷ ಕರುಣಿಸುತ್ತಾನೆ. ಶಿವನಿಗೆ ಗಿಡಮೂಲಿಕೆಯ ಶುಶ್ರೂಷೆ ಸಿಗುವುದರಿಂದ ಈ ದೇವಾಲಯಕ್ಕೆ ವೈದ್ಯನಾಥೇಶ್ವರ ಎಂದು ಪ್ರಸಿದ್ದಿ ಪಡೆದಿದೆ.
ಸರಳ ದರ್ಶನ ಹಾಗೂ ಸ್ಥಳೀಯರಿಗೆ ಅವಕಾಶ : ಹಿಂದೆ 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ನಡೆದಿತ್ತು. 7 ವರ್ಷಗಳ ಬಳಿಕ ಈಗ 2020ರಲ್ಲಿ ನಡೆಯುತ್ತಿರುವ ಪಂಚಲಿಂಗ ದರ್ಶನ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಯುತ್ತಿದೆ. ತಲಕಾಡು ಸೇರಿದಂತೆ ಅಕ್ಕಪಕ್ಕದ ಸ್ಥಳೀಯರು 35 ಸಾವಿರ ಜನ ಇರುವುದರಿಂದ ಅವರಿಗೂ ಮಧ್ಯಾಹ್ನ 3 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಿದೆ ಜಿಲ್ಲಾಡಳಿತ.
ಮುಖ್ಯವಾಗಿ ಕೋವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ಕೋವಿಡ್ನ ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನ ಮೇರೆಗೆ ಪ್ರತಿ 1000 ಜನರಿಗೆ ಹಾಗೂ ದಿನಾಂಕ 14 ರಂದು 1,5000 ಜನರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ದರ್ಶನಕ್ಕೆ ಬರುವವರು ಆರ್ಟಿಪಿಸಿಆರ್ ಪರೀಕ್ಷೆ ವರದಿ ತರುವುದು ಕಡ್ಡಾಯವಾಗಿದ್ದು, ಜೊತೆಗೆ ಭಕ್ತಾದಿಗಳಿಗೆ ಮನೆಯಲ್ಲಿಯೇ ಕುಳಿತು ವೀಕ್ಷಣೆ ಮಾಡಲು ವರ್ಚುವಲ್ ಮೂಲಕ ಸಿದ್ಧತೆ ಮಾಡಲಾಗಿದೆ.
2ನೇ ಬಾರಿ ಪಂಚಲಿಂಗ ದರ್ಶನದಲ್ಲಿ ಭಾಗವಹಿಸಿತ್ತಿರುವ ಬಿಎಸ್ವೈ: 2009ರಲ್ಲಿ ಸಿಎಂ ಆಗಿದ್ದಾಗ ಪಂಚಲಿಂಗ ದರ್ಶನಕ್ಕೆ ಯಡಿಯೂರಪ್ಪ ಚಾಲನೆ ನೀಡದ್ದರು. ಈಗ ಮತ್ತೊಮ್ಮೆ 2020ರಲ್ಲಿ ಪಂಚಲಿಂಗ ದರ್ಶನದಲ್ಲಿ ಡಿಸೆಂಬರ್ 14ರಂದು ಭಾಗವಹಿಸಿ ತಲಕಾಡಿನಲ್ಲಿ ಪವಿತ್ರ ಸ್ನಾನ ಮಾಡಿ ಪಂಚಲಿಂಗ ದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು, ಯಡಿಯೂರಪ್ಪ ಅವರು ಎರಡನೇ ಬಾರಿ ಪಂಚಲಿಂಗ ದರ್ಶನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.
ಪಂಚಲಿಂಗ ದರ್ಶನದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರವಹಿಸಿದೆ. ಅಗ್ನಿಶಾಮಕ ಇಲಾಖೆಯಿಂದ 2 ಅಗ್ನಿಶಾಮಕ ವಾಹನ, ನದಿಯಲ್ಲಿ ದೋಣಿಗಳು, ಓಬಿಎಂ ಮುಂತಾದ ಸುರಕ್ಷತಾ ವ್ಯವಸ್ಥೆ ಮಾಡಲಾಗಿದೆ.
ಪೂಜಾ ಕಾರ್ಯಕ್ರಮಗಳ ಪಟ್ಟಿ : ಇಂದು ಅಂಕುರಾರ್ಪಣೆ, ನವಗ್ರಹ ಕಲಶ ಸ್ವಪ್ನದೊಂದಿಗೆ ದರ್ಶನ ಮಹೋತ್ಸವ. 11ರಂದು ಧ್ವಜಾರೋಹಣ, ಪುಷ್ಪಮಂಟಪಾರೋಹಣ, ವೃಷಭಾರೋಹಣಾ, 14 ರಂದು ಮಹಾಭಿಷೇಕ, 7.30ಕ್ಕೆ ಪಂಚಲಿಂಗ ದರ್ಶನ, 15ರಂದು ಬ್ರಹ್ಮರಥೋತ್ಸವ, 16 ರಂದು ಅಶ್ವಾರೋಹಣ, 17ರಂದು ಅವಭೃತ ತೀರ್ಥಸ್ಥಾನ, ತೆಪ್ಪೋತ್ಸವ, 18 ರಂದು ಪಂಚಾಭಿಷೇಕ, ಕೈಲಾಸವಾಹನೋತ್ಸವ, 19 ರಂದು ನಂದಿ ವಾಹನೋತ್ಸವ ಪೂಜಾ ಕಾರ್ಯಗಳು ನಡೆಯಲಿವೆ. ಕೋವಿಡ್ ಹಿನ್ನೆಲೆ ಸರಳ ಹಾಗೂ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ಉತ್ಸವ ಜರುಗಲಿದೆ.
ಓದಿ: ತಲಕಾಡು ಪಂಚಲಿಂಗ ದರ್ಶನಕ್ಕೆ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ: ಡಿಸಿ ರೋಹಿಣಿ ಸಿಂಧೂರಿ ಆದೇಶ