ಮೈಸೂರು: ಚಾಮರಾಜನಗರ ಜಿಲ್ಲೆ ರಾಜ್ಯದ 31 ಜಿಲ್ಲೆಗಳಲ್ಲಿ ಒಂದು. ಈ ಐತಿಹಾಸಿಕ ಜಿಲ್ಲೆಗೆ ಭೇಟಿ ನೀಡುತ್ತಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಚಾಮರಾಜ ನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತೇನೆ ಎನ್ನುವ ಮೂಢನಂಬಿಕೆ ನನ್ನ ತಲೆಯಲ್ಲಿಲ್ಲ. ಜಿಲ್ಲೆಯ ಅಭಿವೃದ್ಧಿ ಆಗಬೇಕು ಅಷ್ಟೇ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿಎಂ ಆದ ಬಳಿಕ 3ನೇ ಬಾರಿ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಜಿಲ್ಲೆಯ ಅಭಿವೃದ್ಧಿ ಆಗಬೇಕು ಎಂಬ ಅಭಿಲಾಷೆ ನನ್ನದು. ಇದನ್ನು ಬಿಟ್ಟು ಯಾವುದೇ ಮೂಢನಂಬಿಕೆ ನನ್ನ ತಲೆಯಲ್ಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗಡಿ ವಿಚಾರ ಚರ್ಚೆಗೆ ದೆಹಲಿಗೆ: ಗಡಿ ವಿಚಾರ ಚರ್ಚೆಗೆ ಕೇಂದ್ರದ ಗೃಹ ಸಚಿವರು ಎರಡು ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ. ನಾನು ದೆಹಲಿಗೆ ಹೋಗಿ ಗೃಹ ಸಚಿವರನ್ನು ಭೇಟಿ ಮಾಡಿ ನಮ್ಮ ನಿಲುವನ್ನು ತಿಳಿಸುತ್ತೇನೆ. ಈ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇರುವುದರಿಂದ ಗಡಿ ವಿಚಾರದ ಕಾನೂನು ನಿಯಮಗಳನ್ನು ಗೃಹ ಸಚಿವರ ಮುಂದೆ ಇಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ನಾನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿದ್ಧತೆ ಮಾಡಿಕೊಂಡು ತೆರಳುತ್ತೇನೆ. ಗೃಹ ಸಚಿವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದರೆ ನಾನು ಸಹ ಆ ವಿಚಾರದ ಬಗ್ಗೆ ಅವರಿಗೆ ವಿವರಿಸುತ್ತೇನೆ. ಆದರೆ, ಮೊದಲು ಗಡಿ ವಿಚಾರದ ಬಗ್ಗೆ ಚರ್ಚೆ ಮಾಡಲು ಕರೆದಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಾಂಗ್ರೆಸ್ನವರು ಒಳಮೀಸಲಾತಿ ವಿರೋಧಿಗಳು: ನಾವು ಅಧಿಕಾರಕ್ಕೆ ಬಂದರೆ ಎಸ್ ಸಿ & ಎಸ್ ಟಿ ಗೆ ಒಳ ಮೀಸಲಾತಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆದರೆ, 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಒಳ ಮೀಸಲಾತಿ ಕೊಡುವುದಿರಲಿ, ಆ ವರದಿಯನ್ನು ಕೂಡ ಮಂಡನೆ ಮಾಡುವ ಧೈರ್ಯ ಮಾಡಲಿಲ್ಲ.
ಈ ಎಲ್ಲ ನಡೆ ನುಡಿಗಳು ಜನರ ಮನಸ್ಸಿನಲ್ಲಿ ಇವೆ. ಪದೇ ಪದೆ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಜೊತೆಗೆ ಮಹದಾಯಿ ವಿವಾದವಾಗಲು ಕಾಂಗ್ರೆಸ್ನವರೇ ಕಾರಣ. ಸೋನಿಯಾ ಗಾಂಧಿ ಗೋವಾದ ಚುನಾವಣೆಗೆ ಹೋಗಿದ್ದ ಸಂದರ್ಭದಲ್ಲಿ ನೀಡಿರುವ ಮಹದಾಯಿಯ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂಬ ಹೇಳಿಕೆಯನ್ನೂ ಜನರು ಇನ್ನೂ ಮರೆತಿಲ್ಲ ಎಂದರು.
ಮಾಂಡೌಸ್ ಚಂಡಮಾರುತದಿಂದ ರಾಜ್ಯದ ಕೆಲವು ಕಡೆ ತೊಂದರೆ ಆಗಿದೆ. ವಿಶೇಷವಾಗಿ ಬೆಳೆದು ನಿಂತ ರಾಗಿಯ ಕಟಾವಿಗೆ ಸ್ವಲ್ಪ ಸಮಸ್ಯೆ ಆಗಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಅಪ್ಪ- ಮಗ ಇಬ್ಬರೂ ಚಾಮರಾಜನಗರಕ್ಕೆ ಭೇಟಿ: ಮೌಢ್ಯಕ್ಕೆ ಸಡ್ಡು ಹೊಡೆದ ಬಿಜೆಪಿ 2ನೇ ಸಿಎಂ ಬೊಮ್ಮಾಯಿ