ಮೈಸೂರು: ಮೂಳೆ ಕ್ಯಾನ್ಸರ್ನಿಂದ ಬಳಲುತ್ತಿದ್ದ 9 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಜಿಲ್ಲೆಯ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದೆ.
ಮೂರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಸುಮಾರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಲಗಾಲಿನಲ್ಲಿ ನೋವು ಮತ್ತು ಊತದ ಸಮಸ್ಯೆಯಿತ್ತು. ಹಾಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ, ಮೂಳೆ ಕ್ಯಾನ್ಸರ್ನಿಂದ ಬಾಲಕಿ ಬಳಲುತ್ತಿದ್ದಾಳೆ ಎಂದು ಹೇಳಿದ್ದಾರೆ. ನಂತರ ಆರಂಭದಲ್ಲಿ ನಿಯೋಡ್ಕುವಂಟ್ ಕಿಮೋಥೆರಪಿ ಮಾಡಲಾಯಿತು. ಕಿಮೋಥೆರಪಿ ಬಾಲಕಿಯ ಸ್ಥಿತಿಗೆ ಶಾಶ್ವತ ಪರಿಹಾರವಲ್ಲವಾದ್ದರಿಂದ ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕಲು ವೈದ್ಯರು ಮುಂದಾದರು.
ಅಲ್ಲದೇ ಎಕ್ಸ್ಟ್ರಾಕಾರ್ಪೊರಿಯಲ್ ರೇಡಿಯೋಥೆರಪಿ ವಿಧಾನವನ್ನು ಶಿಫಾರಸು ಮಾಡಿದರು. ಈ ಕಾರ್ಯವಿಧಾನದಲ್ಲಿ ಕ್ಯಾನ್ಸರ್ ಪೀಡಿತ ಮೂಳೆಯನ್ನು ದೇಹದಿಂದ ಬೇರ್ಪಡಿಸಿದ ನಂತರ, ಬರಡಾದ ರೀತಿಯಲ್ಲಿ ವಿಕಿರಣ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಕ್ಯಾನ್ಸರ್ ಕೋಶಗಳು ನಾಶವಾದ ನಂತರ ಅದೇ ಮೂಳೆಯನ್ನು ಅದರ ಸ್ಥಾನದಲ್ಲಿ ಮರು ಜೋಡಣೆ ಮಾಡಲಾಗುತ್ತದೆ. ಈ ರೀತಿ ಬಾಲಕಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗಿದೆ.
ಅತ್ಯಾಧುನಿಕ ವೈದ್ಯಕೀಯ ಕಾರ್ಯವಿಧಾನದ ಮೂಲಕ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಈ ಕಾರ್ಯ ವಿಧಾನವು ಮಗುವನ್ನು ಕ್ಯಾನ್ಸರ್ನಿಂದ ಗುಣಪಡಿಸಿದೆ ಮಾತ್ರವಲ್ಲ, ಮಗುವು ತನ್ನ ನೈಸರ್ಗಿಕ ಮೂಳೆಯನ್ನು ಉಳಿಸಿಕೊಳ್ಳಲು ಸಹ ಅವಕಾಶ ಕಲ್ಪಿಸಿತು. ಈ ಒಂದು ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಎಕ್ಸ್ಟ್ರಾಕಾರ್ಪೊರಿಯಲ್ ರೇಡಿಯೋಥೆರಪಿ ಕಾರ್ಯ ವಿಧಾನವನ್ನು ಅನುಸರಿಸಿದ ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಗೆ ನಮ್ಮ ಆಸ್ಪತ್ರೆ ಪಾತ್ರವಾಗಿದೆ ಎಂದು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಎಂ.ಬಿ.ಸುಮನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.