ಮೈಸೂರು: ಮುಡಾಕ್ಕೆ ಸೇರಿದ ಜಾಗವನ್ನು ಯಾರೇ ಅತಿಕ್ರಮಿಸಿಕೊಂಡರು ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಆಸ್ತಿಯನ್ನು ಕೆಲವರು ಅತಿಕ್ರಮಣ ಮಾಡಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಸ್ವತ್ತುಗಳನ್ನು ಖರೀದಿಸಿರುವವರು ಮೂಲ ದಾಖಲೆಗಳನ್ನು ಒಂದು ಸಾರಿ ಮುಡಾಕ್ಕೆ ಬಂದು ಖಚಿತಪಡಿಸಿಕೊಳ್ಳಬೇಕು ಎಂದರು.
ಇನ್ನು ಮುಡಾ ಬಡಾವಣೆಯ ಅಂದವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಜೊತೆಗೆ, ಮುಡಾಗೆ ಸೇರಿದ ಎಲ್ಲ ದಾಖಲೆಗಳನ್ನು ಗಣಕೀಕೃತ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಡವರಿಗೆ, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಮನೆ ನಿರ್ಮಿಸುವ ಯೋಜನೆಯನ್ನು ಸಹ ಕೈಗೊಳ್ಳಲಾಗಿದೆ. ಸರಳ ದಸರಾ ಆಚರಣೆಗೆ ಮೂಡಾ ಪ್ರಾಧಿಕಾರದಿಂದ 5 ಕೋಟಿ ರೂ. ನೀಡಲು ಅನುಮತಿ ಕೇಳಲಾಗಿದೆ. ಅನುಮತಿ ನೀಡಿದ ತಕ್ಷಣ 5 ಕೋಟಿ ರೂ. ಕೊಡಲಾಗುವುದು ಎಂದರು. ನಗರವನ್ನು ಮುಂದಿನ 20 ವರ್ಷದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಇದೇ ವೇಳೆ ಅಧ್ಯಕ್ಷರು ತಿಳಿಸಿದರು.