ಮೈಸೂರು: ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಸಾವಿರಾರು ಜನರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತಿರುಸುವ ಕೆಲಸವನ್ನು ರಾಜ್ಯದ ಏಕೈಕ ಮೈಸೂರಿನ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಮಾಡುತ್ತಿದೆ. ಈ ವಿದ್ಯಾಲಯದ ಕುರಿತು ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರ ಮೇಲೆ ಕೆಲಸದ ಮೇಲಿನ ಒತ್ತಡ, ಯಾಂತ್ರಿಕ ಬದುಕು ಸೇರಿದಂತೆ ಹಲವು ಸಮಸ್ಯೆಗಳು ಪ್ರಭಾವ ಬೀರುತ್ತಿದೆ. ಇದರಿಂದ ಜನರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ರೀತಿಯ ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮೊರೆಹೊಗುತ್ತಿದ್ದಾರೆ. ಮೈಸೂರಿನ ಕೆಆರ್ಎಸ್ ರಸ್ತೆಯ ಬಳಿ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಇದೆ. ಇದು ಪ್ರಕೃತಿ ಚಿಕಿತ್ಸೆ ಮೂಲಕ ಹಾಗೂ ಯೋಗದ ಮೂಲಕ ಜನರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿ ಗುಣಮುಖರನ್ನಾಗಿ ಮಾಡುವ ಕಾರ್ಯವನ್ನು ಮಾಡುತ್ತಿದೆ.
ಈ ಸರ್ಕಾರಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಮಹಾವಿದ್ಯಾಲಯ 2006 ರಿಂದ 2012 ರವರೆಗೆ ಪಿಕೆಟಿಬಿ ಹಾಗೂ ಸರ್ಕಾರಿ ಆಯುರ್ವೇದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2016 ರ ನಂತರ ಕೆಆರ್ಎಸ್ ರಸ್ತೆಯಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿ, ಅಲ್ಲಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಮಹಾವಿದ್ಯಾಲಯ ಆರಂಭವಾಯಿತು. ಇದು ಇಡೀ ರಾಜ್ಯದಲ್ಲೇ ಏಕೈಕ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಸರ್ಕಾರಿ ಮಹಾವಿದ್ಯಾಲಯ ಸಹ ಆಗಿದೆ.
ರೋಗಿಗಳಿಗೆ ಉಚಿತ ಚಿಕಿತ್ಸೆ: ಈ ಮಹಾವಿದ್ಯಾಲಯ ಪ್ರತಿನಿತ್ಯವೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಧಾನಗಳ ಮೂಲಕ ಕನಿಷ್ಠ ನೂರು ಮಂದಿಗೆ ಚಿಕಿತ್ಸೆ ನೀಡಿ, ರೋಗಿಗಳನ್ನು ಗುಣಪಡಿಸುತ್ತಿದೆ. ತನ್ನ ಯೋಗ ಪದ್ಧತಿಗಳಾದ ಫಿಸಿಯೋಥೆರಪಿ, ಹೈಡ್ರೋಥೆರಪಿ, ಮಡ್ ಥೆರಪಿ, ಮಸಾಜ್ ಥೆರಪಿ ಹೀಗೆ 30ಕ್ಕೂ ಅಧಿಕ ಚಿಕಿತ್ಸೆ ಕ್ರಮಗಳನ್ನು ಅನುಸರಿಸಿ ಉಚಿತವಾಗಿ ರೋಗಿಗಳಿಗೆ ನೀಡಲಾಗುತ್ತಿದೆ. ಸುಮಾರು 50 ರಷ್ಟು ಒಳರೋಗಿಗಳು ಮತ್ತು 100 ರಷ್ಟು ಹೊರ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಹೊರಹೋಗುತ್ತಿದ್ದಾರೆ. ಇದರ ಜೊತೆಗೆ ನಿತ್ಯವೂ ಸಾರ್ವಜನಿಕರಿಗೆ ಯೋಗಭ್ಯಾಸದ ತರಗತಿಗಳನ್ನು ಸಹ ನೀಡಲಾಗುತ್ತಿದೆ.
ರೋಗಿಗಳಿಗೆ ನೀಡುವ ಚಿಕಿತ್ಸೆಯ ವಿಧಾನಗಳು: ಈ ಸರ್ಕಾರಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಮಹಾವಿದ್ಯಾಲಯದಲ್ಲಿ ತಮ್ಮದೇ ಆದ ಚಿಕಿತ್ಸಾ ಪದ್ಧತಿ ಮೂಲಕ ಜನರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಸುರುಳಿ ಸ್ನಾನ, ಒಣ ಹವೆ ಸ್ನಾನ, ಸರ್ವಾಂಗ ಸ್ಪಂದನಾ, ಬೆನ್ನು ಹುರಿ ಸ್ನಾನ, ಜಲಕಂಪನ, ಹಸ್ತ ಸ್ನಾನ, ಪಾದ ಸ್ನಾನ, ಉಪವಾಸ ಮತ್ತು ಪಥ್ಯಾಹಾರ ಚಿಕಿತ್ಸೆ ಜೊತೆಗೆ ಫಿಸಿಯೋಥೆರಪಿ ಚಿಕಿತ್ಸೆಯನ್ನು ಸಹ ಇಲ್ಲಿ ಬರುವ ರೋಗಿಗಳಿಗೆ ನೀಡಲಾಗುತ್ತದೆ.
ಇದರ ಜೊತೆಗೆ ರಕ್ತದೊತ್ತಡ, ಮಧುಮೇಹ, ಬೊಜ್ಜಿನ ಸಮಸ್ಯೆ ಪಾರ್ಶ್ವವಾಯು, ತಲೆನೋವು, ಮಂಡಿ ನೋವು, ಉಸಿರಾಟದ ತೊಂದರೆ, ಮಲಬದ್ಧತೆ, ನರ ದೌರ್ಬಲ್ಯ, ಋತುಚಕ್ರದ ಸಮಸ್ಯೆ, ನರ ದೌರ್ಬಲ್ಯ ಸಮಸ್ಯೆ, ಚರ್ಮರೋಗಗಳ ಸಮಸ್ಯೆ ಸೇರಿದಂತೆ ಪ್ರಮುಖ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಸರ್ಕಾರಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಶ್ವವಿದ್ಯಾಲಯದ ಬಗ್ಗೆ ಪ್ರಾಚಾರ್ಯರ ಮಾತು: ಸರ್ಕಾರಿ ಪ್ರಕೃತಿ ಚಿಕಿತ್ಸೆ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಗಜಾನನ ಹೆಗ್ಡೆ ಅವರು, ಈ ಮಹಾವಿದ್ಯಾಲಯ 2006 ರಿಂದ ಆರಂಭವಾಗಿ ಇಂದಿಗೆ 16 ವರ್ಷ ಕಳೆದಿದೆ. ಈ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಅತೀ ಕಡಿಮೆ ಸಮಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣ ಮತ್ತು ತರಬೇತಿ ದೊರೆಯುತ್ತಿದೆ. ಇಲ್ಲಿನ ಚಿಕಿತ್ಸಾ ವಿಧಾನ ಅತ್ಯುತ್ತಮವಾಗಿದೆ. ಇದರಿಂದಲೇ ನಮ್ಮ ಈ ವಿಶ್ವವಿದ್ಯಾಲಯಕ್ಕೆ ಸಾರ್ವಜನಿಕರು ಮತ್ತು ರೋಗಿಗಳು ಹೆಚ್ಚು ಸಂಖ್ಯೆಯಲ್ಲಿ ಬಂದು ಗುಣಮುಖರಾಗಿ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಜಾಗತಿಕವಾಗಿ ನಡೆಯುವ ಪ್ರಮುಖ ಆರು ಯೋಗ ಉತ್ಸವಗಳಿವು: ಒಮ್ಮೆಯಾದ್ರೂ ಭಾಗಿಯಾಗಿ!