ಮೈಸೂರು: ಒಂದು ಸಾವಿರ ಇಂಗ್ಲಿಷ್ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಮೂಲಕ ಕನ್ನಡ ಭಾಷೆಯನ್ನು ರಾಜ್ಯ ಸರ್ಕಾರವೇ ಹೊಸಕಿ ಹಾಕುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಮೈಸೂರು ಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಬಹುಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲೆಯಿಂದಲೆ ರಾಜ್ಯ ಸರ್ಕಾರ 1 ಸಾವಿರ ಇಂಗ್ಲಿಷ್ ಶಾಲೆ ತೆರೆಯುವುದರಿಂದ ಪರೋಕ್ಷವಾಗಿ ಕನ್ನಡ ಭಾಷೆ ಹಿಂದಕ್ಕೆ ತಳ್ಳಲ್ಪಡುತ್ತಿದೆ. ಈ ಬೆಳವಣಿಗೆಗಳು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕನ್ನಡ ಶಾಲೆಗಳೇ ಮುಚ್ಚಿಹೋಗಲಿವೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದಂತೆ ಹಿಂದಿ ಹೇರಿಕೆಗೆ ಮುಂದಾಗಿದೆ. ಆದರೆ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ತ್ರಿಭಾಷಾ ಸೂತ್ರ ವಿರುದ್ಧ ತಿರುಗಿ ಬಿದ್ದ ಪರಿಣಾಮ, ಕೇಂದ್ರ ಸರ್ಕಾರ ಹೇರಿಕೆ ಶಬ್ಧವನ್ನು ಮಾತ್ರ ತೆಗೆಯಲು ಮುಂದಾಗಿದೆ ಅಷ್ಟೆ. ಆದ್ರೆ, ಮುಂದೊಂದಿನ ಹಿಂದಿ ಹೇರಿಕೆ ಮಾಡೇ ಮಾಡುತ್ತದೆ ಎಂದು ಅವರು ಭವಿಷ್ಯ ನುಡಿದರು.