ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಮಾತ್ರವಲ್ಲ 224 ಕ್ಷೇತ್ರದಲ್ಲೂ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳಿದ್ದಾರೆ. ಮುಂದಿನ ಬಾರಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಟಿ ದೇವೇಗೌಡರನ್ನು ಬಿಜೆಪಿಯವರು ಕರೆದಿಲ್ಲ. ಅವರು ಜೆಡಿಎಸ್ ಶಾಸಕರು, ಜೆಡಿಎಸ್ನಲ್ಲೇ ಉಳಿದಿದ್ದಾರೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿಲ್ಲ. ನಾವಂತೂ ಅವರನ್ನು ಸಂಪರ್ಕಿಸಿಲ್ಲ. ನಾನು ಮೊದಲೇ ಹೇಳಿದ್ದೆ, ಜಿ ಟಿ ದೇವೇಗೌಡರ ನಡೆ ಮತ್ತು ಮೀನಿನ ಹೆಜ್ಜೆ ಎರಡು ಒಂದೇ ಎಂದು. ಎರಡನ್ನು ಕಂಡು ಹಿಡಿಯಲು ಆಗುವುದಿಲ್ಲ ಎಂದು ಹಿಂದಿನ ಹೇಳಿಕೆಯನ್ನ ನೆನಪಿಸಿದರು.
ದಸರಾ ಖರ್ಚು ವೆಚ್ಚದ ಲೆಕ್ಕಾಚಾರವನ್ನ ಎಲ್ಲಾ ಕಮಿಟಿಯವರು ಕೊಟ್ಟಿದ್ದಾರೆ. ಇನ್ನೂ 2 ಕಮಿಟಿಯವರು ಕೊಡಬೇಕು. ಇವತ್ತು ಅವರು ಕೊಟ್ಟರೆ ಇವತ್ತೇ ಪತ್ರಿಕಾಗೋಷ್ಠಿ ಮಾಡುತ್ತೇನೆ. ಇಲ್ಲದಿದ್ದರೆ ಮುಂದಿನ ವಾರ ಸುದ್ದಿಗೋಷ್ಠಿ ಮಾಡಿ ಮಾಹಿತಿ ನೀಡುತ್ತೇನೆ ಎಂದರು.
ಇದನ್ನೂ ಓದಿ: ಹಾಲಿನ ದರ ಏರಿಕೆ ಪ್ರಸ್ತಾಪ, ಸಿಎಂರದ್ದೇ ಅಂತಿಮ ತೀರ್ಮಾನ: ಸಚಿವ ಎಸ್ ಟಿ ಸೋಮಶೇಖರ್
ಮೈಸೂರು ಡಿಸಿ ವರ್ಗಾವಣೆ: ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಆಡಳಿತಾತ್ಮಕ ವಿಚಾರವಾಗಿದ್ದು, ಅದರಲ್ಲಿ ವಿಶೇಷತೆ ಏನು ಇಲ್ಲ. ಪಾರಂಪರಿಕ ಕಟ್ಟಡಗಳ ಕುಸಿತ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ. ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದೆ. ಇದರಿಂದ ಕೆಲವು ಕಡೆ ಹಾನಿಯಾಗುತ್ತಿದೆ ಇದು ನನ್ನ ಗಮನಕ್ಕೆ ಬಂದಿದೆ ಎಂದರು.
ಇದನ್ನೂ ಓದಿ: ರಾಹುಲ್ ಗಾಂಧಿ ಮೆಚ್ಚಿಸಲು ಮೇಲ್ನೋಟಕ್ಕಷ್ಟೇ ನಾಯಕರ ಓಡಾಟ : ಸೋಮಶೇಖರ್ ಟೀಕೆ