ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ದಾಳಿ ಮಾಡುವ ಹುಲಿಗಳ ಸೆರೆ ಹಿಡಿಯಲು ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಸಚಿವ ಮಹಾದೇವಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹಾದೇವಪ್ಪ, ನಿನ್ನೆ ನಂಜನಗೂಡು ತಾಲ್ಲೂಕಿನಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಗಮನಿಸಿ ಟಾಸ್ಕ್ ಫೋರ್ಸ್ ಸಮಿತಿ ರಚನೆಯನ್ನು ಈಗಾಗಲೇ ಮಾಡಲಾಗಿದೆ. ನಿನ್ನೆ ನಂಜನಗೂಡು ಸಮೀಪದ ಬಳ್ಳೂರು ಗ್ರಾಮದಲ್ಲಿ ಮಹಿಳೆಯೊಬ್ಬರನ್ನ ಬಲಿ ಪಡೆದ ಹುಲಿ ಸೆರೆಗೆ ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯೆ: ಲೋಕಸಭೆಗೂ ಮುನ್ನ ಜಾತಿಗಣತಿ ಬಿಡುಗಡೆಯಾಗಲ್ಲ ಎಂಬ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜಕೀಯಕ್ಕೂ ಜಾತಿಗಣತಿ ವರದಿ ಬಿಡುಗಡೆಗೂ ಯಾವುದೇ ಸಂಬಂಧ ಇಲ್ಲ. ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ವಿಷಯಗಳಿಗೆ ಸಂಬಂಧ ಪಟ್ಟಿದೆ. ದೇಶದಲ್ಲಿ ಸಂಪತ್ತು, ಅಧಿಕಾರ ಹಂಚಿಕೆ ಆಗಬೇಕೆಂಬುದು ಸಂವಿಧಾನದ ಹಕ್ಕಾಗಿದೆ. ಯಾರ್ಯಾರ ಪರಿಸ್ಥಿತಿ ಹೇಗಿದೆ? ಎಷ್ಟಿದ್ದಾರೆಂಬುದು ಅರಿಯಲು ಜಾತಿಗಣತಿ ನಡೆದಿದೆ ಎಂದು ಹೇಳಿದರು.
ಮಗ ಸುನೀಲ್ ಬೋಸ್ ಸ್ಪರ್ಧೆ: ತಮ್ಮ ಮಗ ಸುನೀಲ್ ಬೋಸ್ ಸ್ಪರ್ಧೆ ಕುರಿತು ಕೇಳಿದ ಪ್ರಶ್ನೆಗೆ ಅವನು ರಾಜಕೀಯದಲ್ಲಿ ಸಕ್ರಿಯವಾಗಿ ಇದ್ದಾನೆ. ಮೂರು ಬಾರಿ ವಿಧಾನಸಭಾ ಟಿಕೆಟ್ ತಪ್ಪಿದೆ. ಅವನು ಇನ್ನೂ ಆಕಾಂಕ್ಷಿಯಾಗಿರುವುದರಲ್ಲಿ ತಪ್ಪಿದಿಯಾ? ಅಧಿಕಾರ ಸಿಗದೇ ಇದ್ದಂತಹ ಸಂದರ್ಭದಲ್ಲಿಯೂ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾನೆ ಎಂದರು. ಜೆಡಿಎಸ್ ಕುಟುಂಬ ರಾಜಕಾರಣ ಕಾಂಗ್ರೆಸ್ ನಲ್ಲಿ ಮುಂದುವರೆಯುತ್ತಿದೆಯೇ ಎಂಬ ಪ್ರಶ್ನೆಗೆ ಇಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆ ಬರುವುದಿಲ್ಲ. ಈ ಬಗ್ಗೆ ಪಾರ್ಟಿ ತೀರ್ಮಾನ ಮಾಡಲಿದೆ ಎಂದರು.
ವಿಧಾನಸಭಾ ಅಧಿವೇಶನದಲ್ಲಿ ಸಮಾಜಕಲ್ಯಾಣ ಇಲಾಖೆ ಎನಾದರೂ ಮಹತ್ವದ ನಿರ್ಣಯ, ತೀರ್ಮಾನ ಕೈಗೊಳ್ಳುವುದು ಇದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ಅಧಿಕಾರಿಗಳೊಟ್ಟಿಗೆ ಸಮಗ್ರವಾಗಿ ಚರ್ಚಿಸಿ ತಿಳಿಸುವುದಾಗಿ ಸಚಿವ ಮಹಾದೇವಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಇದನ್ನೂ ಓದಿ: ಡಿಕೆಶಿ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಅವಸರದ ತೀರ್ಮಾನ ಕೈಗೊಂಡಿದೆ: ಸಚಿವ ಪ್ರಿಯಾಂಕ್ ಖರ್ಗೆ