ಮೈಸೂರು: ಯುವಕನ ಕೊಲೆ ಪ್ರಕರಣದಲ್ಲಿ ಮಗ ಮತ್ತು ಪತಿ ಜೈಲುಪಾಲಾದ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಂಡತಿ ಸಾವಿನ ವಿಚಾರ ತಿಳಿದು ಪತಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಮೃತಪಟ್ಟವರನ್ನು ಸಾಮ್ರಾಟ್ ಹಾಗೂ ಆತ್ಮಹತ್ಯೆಗೆ ಶರಣಾದವರನ್ನು ಇಂದ್ರಾಣಿ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ: ಕಳೆದ ಶನಿವಾರ ರಾತ್ರಿ ಮೈಸೂರು ನಗರದ ವಿದ್ಯಾನಗರದ 4 ನೇ ಕ್ರಾಸ್ನ ನಿವಾಸಿ ಬಾಲರಾಜ್ ಎಂಬುವನನ್ನು ಕ್ಷುಲ್ಲಕ ಕಾರಣಕ್ಕಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಸಂಬಂಧ ಬಾಲರಾಜ್ ಸ್ನೇಹಿತರಾದ ತೇಜಸ್, ಸಂಜಯ್, ಕಿರಣ್ ಹಾಗೂ ತೇಜಸ್ ತಂದೆ ಸಾಮ್ರಾಟ್ ಎಂಬುವವರನ್ನು ಆರೋಪಿಗಳೆಂದು ಪೊಲೀಸರು ದೂರು ದಾಖಲಿಸಿದ್ದರು.
ತೇಜಸ್ ತಾಯಿ ಆತ್ಮಹತ್ಯೆ: ಕೊಲೆ ಪ್ರಕರಣದ ಬಳಿಕ ತೇಜಸ್, ಸಂಜಯ್ ಮತ್ತು ಕಿರಣ್ ನಾಪತ್ತೆಯಾಗಿದ್ದರು. ಆದ್ರೆ ಸಾಮ್ರಾಟ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ಶನಿವಾರ ರಾತ್ರಿ ಜೈಲಿಗೆ ಕಳುಹಿಸಿದ್ದರು. ಮಗ ಮತ್ತು ಗಂಡ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಮನನೊಂದ ತೇಜಸ್ ತಾಯಿ ಇಂದ್ರಾಣಿ (35) ಮನೆಯಲ್ಲೇ ಭಾನುವಾರ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ನಜರ್ ಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ತಂದೆಯೂ ಹೃದಯಾಘಾತದಿಂದ ಸಾವು: ಸಾಮ್ರಾಟ್ ಜೈಲಿನಲ್ಲಿದ್ದಾಗ ನಾಪತ್ತೆಯಾಗಿದ್ದ ಉಳಿದ ಮೂವರು ಆರೋಪಿ ಯುವಕರನ್ನು ಪೋಲಿಸರು ಬಂಧಿಸಿ ಜೈಲಿಗೆ ಕರೆತಂದಿದ್ದರು. ಆಗ ತಾಯಿ ಆತ್ಮಹತ್ಯೆಗೆ ಶರಣಾಗಿರುವ ವಿಚಾರವನ್ನು ತಂದೆಗೆ ಮಗ ತೇಜಸ್ ತಿಳಿಸಿದ್ದಾನೆ. ನಂತರದಲ್ಲಿ ಜೈಲಿನಲ್ಲೇ ಸಾಮ್ರಾಟ್ಗೆ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸೋಮವಾರ ರಾತ್ರಿ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾಮ್ರಾಟ್ ಸಾವನ್ನಪ್ಪಿದ್ದಾರೆ. ಬಳಿಕ ಕೆ ಆರ್ ಆಸ್ಪತ್ರೆಯಲ್ಲಿ ಗಂಡ, ಹೆಂಡತಿಯ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ತಂದೆ ತಾಯಿಯ ಅಂತ್ಯಕ್ರಿಯೆ ಮಾಡಲು ಆರೋಪಿ ತೇಜಸ್ಗೆ ನ್ಯಾಯಾಲಯ ಅನುಮತಿ ನೀಡಿದೆ. ಚಾಮುಂಡಿ ಬೆಟ್ಟದ ರುದ್ರ ಭೂಮಿಯಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿದೆ.
ಪ್ರಕರಣದ ಬಗ್ಗೆ ನಗರ ಪೊಲೀಸ್ ಕಮಿಷನರ್ ಹೇಳಿದ್ದೇನು? ತಂದೆ ಹಾಗೂ ಮಗ ಇಬ್ಬರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಬಾಲರಾಜ್ ಎಂಬ ಯುವಕನ ಕೊಲೆಯಾಗಿತ್ತು. ಪ್ರಕರಣದಲ್ಲಿ ತೇಜಸ್ A1 ಆರೋಪಿ. ತೇಜಸ್ ತಂದೆ ಸಾಮ್ರಾಟ್ A4 ಆರೋಪಿ. ಕೊಲೆ ವೇಳೆ ತಂದೆ ಸಾಮ್ರಾಟ್ ಸಹ ಸ್ಥಳದಲ್ಲಿದ್ದರು. ಘಟನೆ ಬಳಿಕ ತೇಜಸ್, ಸಂಜಯ್, ಕಿರಣ್ ತಲೆಮರೆಸಿಕೊಂಡಿದ್ದರು. ನಂತರ ತೇಜಸ್ ತಂದೆ ಸಾಮ್ರಾಟ್ನನ್ನು ಬಂಧಿಸಲಾಗಿತ್ತು. ಭಾನುವಾರ ಬೆಂಗಳೂರಿನಲ್ಲಿ ಉಳಿದ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿತ್ತು. ತಂದೆ, ಮಗ ಜೈಲು ಸೇರಿದ ಕಾರಣ ಮನನೊಂದು ತಾಯಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರ ಮಧ್ಯ ರಾತ್ರಿ ಸಾಮ್ರಾಟ್ಗೆ ಜೈಲಿನಲ್ಲಿ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಜಯದೇವ ಆಸ್ಪತ್ರೆಗೆ ಚಿಕಿತ್ಸೆ ಕಳುಹಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಾಮ್ರಾಟ್ ಮೃತಪಟ್ಟಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ರಮೇಶ್ ಬಾನೋತ್ ಹೇಳಿಕೆ.
ಇದನ್ನೂ ಓದಿ: Mother murder: ಪುತ್ರನ ಮೊಬೈಲ್ನಿಂದ ಅಪರಿಚಿತ ವ್ಯಕ್ತಿಗೆ ತಾಯಿ ಮೆಸೇಜ್; ಅನುಮಾನಿಸಿ ಹೆತ್ತಮ್ಮನನ್ನೇ ಹತ್ಯೆಗೈದ ಮಗ!