ಮೈಸೂರು : ಜೆಡಿಎಸ್ ಹಾಗೂ ಬಿಜೆಪಿ 29 ಕಡೆ ಒಳ ಒಪ್ಪಂದ ಮಾಡಿಕೊಂಡಿದ್ರು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಒಳ ಒಪ್ಪಂದ ಜನಕ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ, ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಒಳ ಒಪ್ಪಂದ ಮಾಡಿಕೊಂಡಿದ್ರು? ಗೊಪಾಲಯ್ಯನಿಗೆ ಟಿಕೆಟ್ ಕೊಟ್ಟವರು ಯಾರು? ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡಲ್ಲ.
ಜೆಡಿಎಸ್-ಬಿಜೆಪಿಯವರು 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ರು. ಎಲ್ಲಾ ಕ್ಷೇತ್ರಗಳಲ್ಲೂ ಅವರು ಮಾಡಿಕೊಂಡಿರಲಿಲ್ಲ, ನಿನ್ನೆ ನಾನು ಅದನ್ನೇ ಹೇಳಿದ್ದು ಎಂದರು. ಚಾಮುಂಡೇಶ್ವರಿಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡದ್ದು ನಿಜ. ನಾನು ಅದನ್ನೇ ಹೇಳಿದ್ದೇನೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬಾದಾಮಿಯಲ್ಲಿ ಮಾಡಿಕೊಂಡಿರಲಿಲ್ಲ.
ಆಯ್ಕೆ ಮಾಡಿಕೊಂಡ ಕೆಲವೇ ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದವು. ಗೊಪಾಲಯ್ಯನಿಗೆ ಟಿಕೆಟ್ ಕೊಟ್ಟು ನಿಲ್ಲಿಸಿದ್ದು ಯಾರು? ಯಾರು ಒಳ ಒಪ್ಪಂದ ಮಾಡಿಕೊಂಡಿದ್ರು ಅಂತಾ ಎಲ್ಲರಿಗೂ ಗೊತ್ತಿದೆ. ಅವರು ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಲ್ಲ ಎಂದರು.
ಓದಿ: ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಕುಮಾರಸ್ವಾಮಿ ಅವರು ತಾಜ್ ವೆಸ್ಟೆಂಡ್‌ನಲ್ಲಿ ಇರಲು ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಸಚಿವ ಸಾ ರಾ ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿಎಂ ಆದ ಮೇಲೆ ತಾಜ್ ವೆಸ್ಟೆಂಡ್‌ಗೆ ಹೋಗಿದ್ದಲ್ಲ. ಅದಕ್ಕಿಂತ ಮುಂಚೆನೇ ಅಲ್ಲಿ ಕುಮಾರಸ್ವಾಮಿ ರೂಂ ಮಾಡಿಕೊಂಡಿದ್ರು ಎಂದು ತಿರುಗೇಟು ನೀಡಿದರು.
ಬಿಜೆಪಿ ಬಗ್ಗೆ ಜೆಡಿಎಸ್ ಸಾಫ್ಟ್ ಅಲ್ಲ. ಅವರ ಬೆಂಬಲಕ್ಕೆ ನಿಂತದ್ದು ಮೇಲ್ಮನೆಯಲ್ಲಿ ಕಾಣಲಿಲ್ಲವೇ? ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗುತ್ತೋ ಇಲ್ವೋ ನಂಗೆ ಗೊತ್ತಿಲ್ಲ? ಆದರೆ, ನಾನು ಜೆಡಿಎಸ್‌ನಲ್ಲಿದ್ದಾಗ 59 ಸ್ಥಾನ ಗೆದ್ದಿದ್ದು, ಅದು ಗೊತ್ತಿದೆಯಲ್ವಾ ಎಂದರು.
ಓದಿ :ಬಾದಾಮಿಯಲ್ಲಿ ಸೋತಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗುತ್ತಿತ್ತು: ಸಿದ್ದರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಪಕ್ಷದ ಮುಖಂಡರು ಕಾರಣ ಅಂತಾ ಹೇಳಿದ್ದೀನಿ. ಇದು ಚಾಮುಂಡೇಶ್ವರಿ ಕ್ಷೇತ್ರದ ವಿಚಾರ ತಾನೆ. ಅಲ್ಲಿಯವರ ಬಗ್ಗೆ ನಾನು ಹೇಳಿರೋದು. ಪಕ್ಷದವರೇ ನನ್ನನ್ನು ಸೋಲಿಸಿದರು ಎಂದು ನಿನ್ನೆ ಹೇಳಿದ್ದನ್ನ ಮತ್ತೊಮ್ಮೆ ಸಮರ್ಥಿಸಿಕೊಂಡರು.