ಮೈಸೂರು : ವರುಣದಲ್ಲಿ 1 ಲಕ್ಷ ಮತಗಳಿಂದ ಗೆಲ್ಲುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ನೋಡಿದರೆ, ಅವರಿಗೆ ಈ ಬಾರಿ ವರುಣದಲ್ಲಿ ಅವರಿಗೆ ಭಯ ಕಾಡುತ್ತಿದೆ. ಅದಕ್ಕಾಗಿ 17 ವರ್ಷದ ಮೊಮ್ಮಗನನ್ನು ಕರೆದುಕೊಂಡು ಬಂದು ಜನರಿಗೆ ಪರಿಚಯ ಮಾಡುವ ಮೂಲಕ ಮತ ಕೇಳುತ್ತಿದ್ದಾರೆ. ಇವರಿಗೆ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮೈಸೂರಿನಲ್ಲಿಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಮೊಮ್ಮಗನನ್ನು ಕರೆದುಕೊಂಡು ಬಂದು ಪೂಜೆ ಹಾಗೂ ಪುನಸ್ಕಾರ ಮಾಡಿ, ಸೆಂಟಿಮೆಂಟಲ್ ಆಗಿ ಮತ ಕೇಳುತ್ತಿದ್ದಾರೆ. ಭಯ ಹಾಗೂ ಪುಕ್ಕಲುತನಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ. ನೀವು ಎಲ್ಲರನ್ನೂ ಕುಟುಂಬ ರಾಜಕಾರಣ ಎಂದು ಟೀಕೆ ಮಾಡುತ್ತೀರಿ. ಆದರೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ಇನ್ನೂ 18 ವರ್ಷದ ತುಂಬದ ಮೊಮ್ಮಗನನ್ನೇ ಉತ್ತರಾಧಿಕಾರಿ ಎಂದು ಬಿಂಬಿಸುವ ನೀವು ಕಾಂಗ್ರೆಸ್ ಹೋದ ಮೇಲೆ ನಿಮ್ಮ ಸಿದ್ಧಾಂತ ಎಲ್ಲಿ ಹೋಯಿತು ಎಂದು ಟೀಕಿಸಿದರು.
ವರುಣದಲ್ಲಿ ನಿಮ್ಮ ಸೋಲು ನಿಶ್ಚಿತ: ಕಾಂಗ್ರೆಸ್ಗೆ ಹೋದ ಮೇಲೆ ನಿಮ್ಮ ಸಿದ್ಧಾಂತ ಹಾಗೂ ನೈತಿಕತೆಯನ್ನು ಕಾಂಗ್ರೆಸ್ ಪಕ್ಕಕ್ಕೆ ಅಡವಿಟ್ಟಿದ್ದೀರಿ. ಮೊಮ್ಮಗನನ್ನು ಕರೆದುಕೊಂಡು ಹೋಗಿ ವರುಣದಲ್ಲಿ ಮತ ಕೇಳುತ್ತಿರುವ ನಿಮ್ಮ ಸ್ಥಿತಿ ನೋಡಿದರೆ, ವರುಣದಲ್ಲಿ ನಿಮ್ಮ ಸೋಲು ನಿಶ್ಚಿತ ಅನಿಸುತ್ತದೆ. ಇನ್ನು ಸಿಎಂ ಆಗಿದ್ದಾಗಲೇ ವರುಣಾದಲ್ಲಿ ಲಕ್ಷ ಮತಗಳಿಂದ ಗೆಲ್ಲಲು ಆಗಲಿಲ್ಲ. ಈಗ ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿ ಹಾಕಿದ್ದಾರೆ. ಅದಕ್ಕೆ ಮೊಮ್ಮಗ ಸೇರಿದಂತೆ ಕುಟುಂಬದ ಎಲ್ಲರೂ ಪ್ರಚಾರಕ್ಕೆ ನಿಂತಿದ್ದೀರಿ ಎಂದರು.
ಇದನ್ನೂ ಓದಿ : ಲಿಂಗಾಯತ ಸಿಎಂ ಚರ್ಚೆ ಆಗಿದೆ, ನಿರ್ಣಯ ಕೈಗೊಂಡಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ
ಒಂದು ಲಕ್ಷ ಮತಗಳಿಂದ ಗೆದ್ದ ಇತಿಹಾಸ ಕರ್ನಾಟಕದಲ್ಲಿ ಇಲ್ಲ. ಮುಖ್ಯಮಂತ್ರಿ ಆಗಿದ್ದಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ 36 ಸಾವಿರ ಮತಗಳ ಅಂತರದಿಂದ ಸೋತಿದ್ದೀರಿ. ಈ ಬಾರಿ ಮೇ. 13 ಕ್ಕೆ ಚಾಮುಂಡಿ ತಾಯಿ ತೀರ್ಪು ನೀಡುತ್ತಾಳೆ. ಅಲ್ಲಿಯವರೆಗೆ ಕಾಯಿರಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಆಸ್ತಿ ವಿವರ ಘೋಷಣೆ ; ಮಾಜಿ ಸಿಎಂ ಗಿಂತ ಅವರ ಪತ್ನಿಯೇ ಶ್ರೀಮಂತೆ!