ಮೈಸೂರು: ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಯ ಬೆನ್ನಲ್ಲೇ ನಾಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಜಿಟಿಡಿ ವೇದಿಕೆ ಹಂಚಿಕೊಳ್ಳುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನವೆಂಬರ್ 9 ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹಿನಕಲ್ ಅಂಬೇಡ್ಕರ್ ಭವನ ಉದ್ಘಾಟನಾ ಕಾರ್ಯಕ್ರಮವಿದೆ. ಮುಡಾದಿಂದ ಅನುದಾನ ಕೊಡಿಸಿದ್ದೆವು. ಅಂಬೇಡ್ಕರ್ ಸಂಘದವರು ಹೋಗಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ. ನನಗೂ ಆಹ್ವಾನ ನೀಡಿದ್ದಾರೆ. ಅಲ್ಲದೇ ಕೇರ್ಗಳ್ಳಿಯಲ್ಲಿ ಕೆಂಚಪ್ಪ ಸಮುದಾಯ ಭವನ ಉದ್ಘಾಟನೆಗೂ ಆಹ್ವಾನ ನೀಡಿದ್ದಾರೆ. ಕ್ಷೇತ್ರದ ಶಾಸಕನಾಗಿ ನಾನೂ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆಗೆ ವೇದಿಕೆಯೇ?:
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರ ಪುತ್ರ ಹರೀಶ್ ಗೌಡರನ್ನು ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಸುತ್ತಾರೆ ಎಂಬ ವದಂತಿಗಳಿದ್ದು, ಇದರ ಜೊತೆಗೆ ಜಿ.ಟಿ.ದೇವೇಗೌಡ ಮತ್ತು ಅವರ ಮಗ ಹರೀಶ್ ಗೌಡ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಳುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮುಂದಿನ ನಡೆ ಬಗ್ಗೆ ಅವರು, ಜನಾಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕುಮಾರಸ್ವಾಮಿ ಬಗ್ಗೆ ಜಿಟಿಡಿಗೆ ಮುನಿಸು:
ಜಿ.ಟಿ.ದೇವೇಗೌಡರು ಜೆಡಿಎಸ್ನಿಂದ ಅಂತರ ಕಾಯ್ದುಕೊಳ್ಳಲು ಕಾರಣ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬ ಮಾತಿದೆ. ಕಳೆದ ತಿಂಗಳು ಚಾಮುಂಡೇಶ್ವರಿ ಕ್ಷೇತ್ರದ ಬೆಳವಾಡಿ ಹಾಗೂ ರಮ್ಮನಹಳ್ಳಿ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದ್ರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಜಿ.ಟಿ.ದೇವೇಗೌಡರಿಗೆ ಆಹ್ವಾನ ನೀಡಿಲ್ಲ. ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬದಲಿ ಅಭ್ಯರ್ಥಿಗಳನ್ನು ಜೆಡಿಎಸ್ ಹುಡುಕುತ್ತಿದ್ದು, ಇದು ಸಹ ಜಿಟಿಡಿ ಮುನಿಸಿಗೆ ಕಾರಣವಾಗಿದೆ. ಇದರಿಂದ ಅಪ್ಪ ಮತ್ತು ಮಗ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ನಾಯಕರಾದ ಸಿದ್ದರಾಮಯ್ಯ ಜೊತೆ ಒಂದು ಸುತ್ತು ಮಾತುಕತೆ ನಡೆಸಿದ್ದು, ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಹುಣಸೂರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಗ ಮತ್ತು ತನಗೇ ಟಿಕೆಟ್ ಬೇಕೆಂದು ಕಾಂಗ್ರೆಸ್ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಮ್ಮತಿ ಸಿಗುವುದು ಕಷ್ಟ ಎನ್ನಲಾಗಿದೆ. ಈ ಮಧ್ಯೆ ಹೆಚ್.ಡಿ.ದೇವೇಗೌಡರು ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದೂ ತಿಳಿದು ಬಂದಿದೆ. ಈ ಎಲ್ಲಾ ಕಾರಣಗಳಿಂದಾಗಿ ನಾಳೆ ಸಿದ್ದರಾಮಯ್ಯ ಜೊತೆ ಒಂದೇ ವೇದಿಕೆಯಲ್ಲಿ ಜಿ.ಟಿ.ದೇವೇಗೌಡರು ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:ಪದ್ಮಶ್ರೀಗೆ ಪುನೀತ್ ರಾಜ್‌ಕುಮಾರ್ ಹೆಸರು ಶಿಫಾರಸು: ಸೂಕ್ತ ಸಮಯದಲ್ಲಿ ನಿರ್ಧಾರವೆಂದ ಸಿಎಂ