ಮೈಸೂರು: ಶರನ್ನವರಾತ್ರಿಗೆ ಅರಮನೆ ಸಂಪೂರ್ಣ ಸಿದ್ದಗೊಂಡಿದೆ. ರಾಜಮನೆತನದವರು 10 ದಿನಗಳ ಕಾಲ ನಡೆಸುವ ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಆಯುಧ ಪೂಜೆ, ವಿಜಯದಶಮಿಯ ಪೂಜಾ ಕೈಂಕರ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಕ್ಟೋಬರ್ 7 ರಂದು ಮೊದಲ ದಿನದ ಖಾಸಗಿ ದರ್ಬಾರ್
ನವರಾತ್ರಿಯ ಮೊದಲ ದಿನವಾದ ಅಕ್ಟೋಬರ್ 7 ರಂದು ಮುಂಜಾನೆ 4.30 ರಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಜರುಗಲಿವೆ. ಅಂದು ಬೆಳಗ್ಗೆ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತ್ರ ಮಾಡಿಸಲಾಗುವುದು. ನಂತರ ಬೆಳಗ್ಗೆ 6 ರಿಂದ 6.11 ರವರೆಗಿನ ಕನ್ಯಾ ಲಗ್ನದಲ್ಲಿ ದರ್ಬಾರ್ ಹಾಲ್ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ ವಜ್ರಖಚಿತ ಸಿಂಹದ ತಲೆ ಜೋಡಣೆ ಮಾಡಲಾಗುತ್ತದೆ.
ಬಳಿಕ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬೆಳಗ್ಗೆ 7.45 ರಿಂದ 8.55 ರ ತುಲಾ ಲಗ್ನದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಅವರಿಗೆ ಕಂಕಣಧಾರಣೆ ಮಾಡಲಾಗುವುದು. ವಾಣಿವಿಲಾಸ ದೇವರ ಮನೆಯಲ್ಲಿ ತ್ರಿಶಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ.
ಬೆಳಗ್ಗೆ 11.45 ರಿಂದ 12.15 ರ ನಡುವಿನ ಧನುರ್ ಲಗ್ನದಲ್ಲಿ ಯದುವೀರ್ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅರಮನೆಯ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಹೋಗಿ ಬಿಜಯ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅಕ್ಟೋಬರ್ 14 ರವರೆಗೆ ಖಾಸಗಿ ದರ್ಬಾರ್ ಜರುಗಲಿದೆ.
ಅಶ್ವಯುಜಾಸ ಶುಕ್ಲಪಕ್ಷದ ಸಪ್ತಮಿ ದಿನವಾದ ಅಕ್ಟೋಬರ್ 12 ರಂದು ಬೆಳಗ್ಗೆ 10.57 ರಿಂದ 11.05 ರವರೆಗೆ ಸಲ್ಲುವ ಧನುರ್ ಶುಭ ಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ವೀಣೆ, ವಿವಿಧ ಗ್ರಂಥಗಳನ್ನಿರಿಸಿ ಯದುವೀರ್ ಸರಸ್ವತಿ ಪೂಜೆ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ನೆರವೇರಲಿದೆ. ಅಕ್ಟೋಬರ್ 13 ರಂದು ಬುಧವಾರ ದುರ್ಗಾಷ್ಟಮಿ ನೆರವೇರಲಿದೆ.
ಆಯುಧ ಪೂಜೆ ವಿಧಿ ವಿಧಾನ: ಅಕ್ಟೋಬರ್ 14 ರಂದು ಬೆಳಗ್ಗೆ 6 ರಿಂದ ಹೋಮದ ಕೊಠಡಿಯಲ್ಲಿ ಚಂಡೀ ಹೋಮ ನಡೆಯಲಿದೆ. ಬೆಳಗ್ಗೆ 7.45 ರಿಂದ 8 ರವರೆಗೆ ತುಲಾ ಲಗ್ನದಲ್ಲಿ ಆಯುಧ ಪೂಜೆ ನಡೆಯಲಿದೆ.
ಖಾಸ್ ಆಯುಧಗಳು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಡೆಗೆ ಕರೆದೊಯ್ಯಲಾಗುತ್ತದೆ. ಬೆಳಗ್ಗೆ 8.25 ರಿಂದ 8.40ರೊಳಗೆ ಆಯುಧ ಮತ್ತು ಪಟ್ಟದ ಆನರ ಕಲ್ಯಾಣ ಮಂಟಪದ ಹೆಬ್ಬಾಗಿಲಿಗೆ ಪ್ರವೇಶಿಸುತ್ತವೆ. 9 ಗಂಟೆಗೆ ಚಂಡೀಹೋಮದ ಪೂರ್ಣಾಹುತಿ ನೆರವೇರಲಿದ್ದು, 11.02 ರಿಂದ 11.22 ರವರೆಗೆ ಧನುರ್ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಪೂಜೆ ನೆರವೇರಿಸಲಾಗುತ್ತದೆ.
ಅಂದು ಸಂಜೆ ಖಾಸಗಿ ದರ್ಬಾರ್ ನೆರವೇರಿದ ಬಳಿಕ ದರ್ಬಾರ್ ಹಾಲ್ ನಲ್ಲಿ ಸಿಂಹಾಸನದಿಂದ ಸಿಂಹದ ತಲೆಯನ್ನು ವಿಸರ್ಜಿಸಲಾಗುತ್ತದೆ. ಬಳಿಕ ದೇವರ ಮನೆಯಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣ ವಿಸರ್ಜಿಸಿದರೆ, ವಾಣಿವಿಲಾಸ ದೇವರ ಅರಮನೆಯಲ್ಲಿ ತ್ರಿಶಿಕ ಕುಮಾರಿ ಒಡೆಯರ್ ಅವರು ಕಂಕಣ ವಿಸರ್ಜಿಸಲಿದ್ದಾರೆ.
ವಿಜಯ ದಶಮಿ ಪೂಜಾ ಕೈಂಕರ್ಯ
ಅಕ್ಟೋಬರ್ 15 ರಂದು ಬೆಳಗ್ಗೆ 6.13 ರಿಂದ 6.22ರ ನಡುವಿನ ತುಲಾ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ಉತ್ತರ ಪೂಜೆ ನೆರವೇರಿಸಲಾಗುತ್ತದೆ. ನಂತರ 7.20 ರಿಂದ 7.40 ರವರೆಗೆ ತುಲಾ ಲಗ್ನದಲ್ಲಿ ಅರಮನೆಯಿಂದ ವಿಜಯ ಯಾತ್ರೆ ಹೊರಟು ಭುವನೇಶ್ವರಿ ದೇವಾಲಯದ ಆವರಣದಲ್ಲಿ ಯದುವೀರ್ ಅವರು ಬನ್ನಿಮರದ ಪೂಜೆ ನೆರವೇರಿಸಲಿದ್ದಾರೆ.
ಓದಿ: ಮಹಾಲಯ ಅಮಾವಾಸ್ಯೆಯ ದಿನ ಆನೆಗಳ ತಾಲೀಮಿಗೆ ರಜೆ: ನಾಳೆಯಿಂದ ಖಾಸಗಿ ದರ್ಬಾರ್