ಮೈಸೂರು: ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಎಂದೇ ಖ್ಯಾತಿ ಪಡೆದ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೂ ಕೂಡ ನಗರದ ಬಸ್ ನಿಲ್ದಾಣಗಳಲ್ಲಿ ಪ್ರತ್ಯೇಕ ಶೌಚಾಲಯ ಮಾಡಲಾಗಿದೆ. ದೇಶದಲ್ಲೇ ಈ ವ್ಯವಸ್ಥೆ ಮಾಡಿರುವ ನಗರಗಳಲ್ಲಿ ಮೊದಲ ನಗರ ಎಂಬ ಖ್ಯಾತಿಯನ್ನು ಪಡೆದಿದೆ.
ಮೈಸೂರಿನಲ್ಲಿ 2,000ಕ್ಕೂ ಹೆಚ್ಚು ಜನ ತೃತೀಯ ಲಿಂಗಿಗಳಿದ್ದು, ನಗರದ ಬಸ್ ನಿಲ್ದಾಣಗಳಲ್ಲಿ, ಅಂಗಡಿಗಳಲ್ಲಿ ಹಣ ಪಡೆದು ಜೀವನ ನಡೆಸುತ್ತಾರೆ. ಇವರುಗಳಿಗೆ ಅನುಕೂಲವಾಗಲಿ ಎಂದು ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇವರುಗಳು ಸಾಮಾನ್ಯ ಜನರಂತೆ ಶೌಚಾಲಯಗಳಿಗೆ ಹೋಗಲು ಮುಜುಗರ ಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಕಳೆದ 4 ವರ್ಷಗಳ ಹಿಂದೆ ಸ್ವಚ್ಛ ನಗರಿಯಲ್ಲಿ ತೃತೀಯ ಲಿಂಗಿಗಳಿಗೂ ಶೌಚಾಲಯ ವ್ಯವಸ್ಥೆ ಮಾಡಲಾಯಿತು.
ಈ ಬಗ್ಗೆ ಮೈಸೂರು ನಗರ ಸಾರಿಗೆ ಸಂಸ್ಥೆಯ ಮೇಲ್ವಿಚಾರಕರಾದ ಪ್ರಕಾಶ್ ಮಾತನಾಡಿ, ಮೈಸೂರು ನಗರ ಸಾರಿಗೆ ವಿಭಾಗದಿಂದ ನಿಲ್ದಾಣದಲ್ಲಿ ಪುರುಷರಿಗೆ, ಸ್ತ್ರೀಯರಿಗೆ , ವಿಕಲಚೇತನರಿಗೆ ಪ್ರತ್ಯೇಕ ಶೌಚಾಲಯ ಇದೆ. ಅದೇ ರೀತಿ ತೃತೀಯ ಲಿಂಗಿಗಳು ಸಾಮಾನ್ಯರ ಶೌಚಾಲಯವನ್ನು ಬಳಸಲು ಮುಜುಗರ ಪಟ್ಟುಕೊಳ್ಳುತ್ತಾರೆ ಎನ್ನುವ ನಿಟ್ಟಿನಲ್ಲಿ ಅವರಿಗೆ ಈ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.