ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಶಾಸಕ ಸಾ ರಾ ಮಹೇಶ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಇಂದು ಅವರು ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿದರು. ಅಷ್ಟೇ ಅಲ್ಲ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡುವುದಾಗಿ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಾ.ರಾ.ಮಹೇಶ್, ಮೈಸೂರಿನ ಹಿಂದಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ, ಬಟ್ಟೆ ಬ್ಯಾಗ್ ಬಳಸಲು ಯೋಜನೆಯನ್ನು ರೂಪಿಸಿದ್ದರು.
ಅದರಂತೆ ಬಟ್ಟೆ ಬ್ಯಾಗ್ಗಳನ್ನು ಉಚಿತವಾಗಿ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಹಂಚಿಕೆ ಮಾಡಲು ಯೋಜನೆ ಹಾಕಿಕೊಂಡಿದ್ದರು. ಈ ಸಂದರ್ಭದಲ್ಲಿ 14,71,458 ಬಟ್ಟೆ ಬ್ಯಾಗ್ ಖರೀದಿಗೆ ಮಹಿಳಾ ಅಧಿಕಾರಿಯೊಬ್ಬರ ಗಂಡನಿಗೆ ಗುತ್ತಿಗೆ ನೀಡಿದ್ದರು. ಆ ಗುತ್ತಿಗೆಯಲ್ಲಿ ಒಂದು ಬ್ಯಾಗ್ ಖರೀದಿಗೆ 52 ರೂ. ನಿಗದಿ ಮಾಡಿದ್ದಾರೆ.
ಆದರೆ, ವಾಸ್ತವವಾಗಿ ಒಂದು ಬ್ಯಾಗ್ಗೆ ಮಾರುಕಟ್ಟೆಯಲ್ಲಿ ಕೇವಲ 8 ರಿಂದ 12 ರೂ. ಬೆಲೆ ಇದೆ. ಒಂದು ಬ್ಯಾಗ್ಗೆ 42 ರೂಪಾಯಿ ಕಮಿಷನ್ ಅಂತೆ ಸುಮಾರು 6 ಕೋಟಿ ರೂ. ಕಿಕ್ ಬ್ಯಾಕ್ ಅನ್ನು ರೋಹಿಣಿ ಸಿಂಧೂರಿ ಪಡೆದಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.
ಉಪವಾಸ ಸತ್ಯಾಗ್ರಹ:
ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುತ್ತೇನೆ. ಜೊತೆಗೆ ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮೂರ್ನಾಲ್ಕು ದಿನ ಸಮಯವಕಾಶ ಕೊಡಲಾಗುವುದು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಮುಖ್ಯ ಕಾರ್ಯದರ್ಶಿ ಕಚೇರಿಯ ಎದುರು ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಸಾ ರಾ ಮಹೇಶ್ ಘೋಷಿಸಿದರು.