ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಜನನಿಬಿಡ ಪ್ರದೇಶಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ.
ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ದೇವರಾಜ ಮಾರುಕಟ್ಟೆ, ಸಂತೆಪೇಟೆ, ಶಿವರಾಮಪೇಟೆ, ಮನ್ನಾರ್ ಮಾರ್ಕೆಟ್, ಬೋಟಿ ಬಜಾರ್ ಈ ಸ್ಥಳಗಳಲ್ಲಿ ಇಂದಿನಿಂದ ನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಸ್ಯಾನಿಟೈಸಿಂಗ್ ಆರಂಭಿಸಿದ್ದು, ಪ್ರತಿನಿತ್ಯ ಈ ಕಾರ್ಯ ಮಾಡಲಿದ್ದಾರೆ.
ಇಂದಿನಿಂದ ಈ ನಾಲ್ಕು ದಿನಗಳು ಈ ಸ್ಥಳಗಳಲ್ಲಿ ವ್ಯಾಪಾರ ವಹಿವಾಟಿಗೆ ಹಾಗೂ ಸಾರ್ವಜನಿಕರು ಸುಳಿದಾಡದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ದೇವರಾಜ ಮಾರುಕಟ್ಟೆಯ ಬೀದಿ ಬದಿ ವ್ಯಾಪಾರಿಗಳು ಇವತ್ತು ಒಂದು ದಿನ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದರಿಂದ ನಗರ ಪಾಲಿಕೆ ಅಧಿಕಾರಿಗಳು ಸಮ್ಮತಿ ನೀಡಿದ್ದಾರೆ. ನಾಳೆಯಿಂದ ಎಲ್ಲ ತರಹದ ವಹಿವಾಟು ಸ್ತಬ್ಧಗೊಳ್ಳಲಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾಹಿತಿ ನೀಡಿದ್ದಾರೆ.