ಮೈಸೂರು: ಒಂದೇ ನೋಂದಣಿ ಸಂಖ್ಯೆಯ ಎರಡು ಐಷಾರಾಮಿ ಬಸ್ಗಳ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಪೊಲೀಸ್ ಠಾಣಾ ಆವರಣದಲ್ಲಿ ನಿಂತಿದ್ದ ಒಂದು ಬಸ್ನ ನಂಬರ್ ಪ್ಲೇಟ್ ರಾತ್ರೋರಾತ್ರಿ ಕಾಣೆಯಾಗಿದೆ.
ಮೈಸೂರು ಮತ್ತು ನಂಜನಗೂಡಿನಲ್ಲಿ ಕೆಎ 11 ಬಿ 2969 ನೋಂದಣಿ ಸಂಖ್ಯೆ ಹೊಂದಿದ್ದ ಕಾಮಧೇನು ಎಂಬ ಎರಡು ಬಸ್ಗಳು ಒಂದೇ ನೋಂದಣಿ ಸಂಖ್ಯೆ ಹಾಕಿಕೊಂಡು ಸಂಚರಿಸುತ್ತಿದ್ದವು.
ಈ ಬಗ್ಗೆ ಅನುಮಾನಗೊಂಡ ಪೊಲೀಸರು ದಾಖಲಾತಿಗಳನ್ನು ಪರಿಶೀಲಿಸಿದಾಗ ಒಂದು ಬಸ್ ನಂಜನಗೂಡಿನಲ್ಲಿ ಮತ್ತೊಂದು ಬಸ್ ಮೈಸೂರಿನಲ್ಲಿ ವಶಕ್ಕೆ ಪಡೆದು ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದರು. ಆದರೆ, ಠಾಣೆಯ ಆವರಣದಲ್ಲಿದ್ದ ಈ ಎರಡು ಬಸ್ಗಳಲ್ಲಿ ಒಂದು ಬಸ್ ನಂಬರ್ ಪ್ಲೇಟ್ ಬೆಳಗಾಗುವುದರೊಳಗಾಗಿ ಕಾಣೆಯಾಗಿದೆ. ಈಗ ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿದ್ದು, ವಿಚಾರಣೆ ಕೈಗೊಂಡಿದ್ದಾರೆ.
ಆರ್ಟಿಒ ಅಧಿಕಾರಿಗಳಿಂದಲೂ ತನಿಖೆ
ನಂಜನಗೂಡಿನ ಪೊಲೀಸರು ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್ಗಳನ್ನು ವಶಕ್ಕೆ ಪಡೆದಿರುವುದು ಮೈಸೂರು ಸಾರಿಗೆ ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರು ಒಂದು ಕಡೆ ತನಿಖೆ ನಡೆಸಿದರೆ, ಮತ್ತೊಂದು ಕಡೆ ಆರ್ಟಿಒ ಕಚೇರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನಂಜನಗೂಡಿನ ಪೊಲೀಸರು ವರದಿ ನೀಡಿದ ನಂತರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮೈಸೂರು ಪ್ರಾದೇಶಿಕ ಆಯುಕ್ತರಾದ ಮೂರ್ತಿ ಈಟಿವಿ ಭಾರತಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ನಂಬರ್ ನಾಪತ್ತೆ ಪ್ರಕರಣವನ್ನು ಪೊಲೀಸರೇ ತನಿಖೆ ನಡೆಸಲಿದ್ದಾರೆ ಎಂದರು.