ಮೈಸೂರು: ಜಿಲ್ಲೆ ಕೊರೊನಾ ಮುಕ್ತವಾದ ಹಿನ್ನೆಲೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲೆ ಹಾಗೂ ರಾಜ್ಯದ ಜನತೆಯನ್ನು ಕಾಪಾಡುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.
ದೇವಾಲಯದ ಒಳಗೆ ಹೋಗದೆ, ದೇವಾಲಯದ ಗೋಪುರದ ಮುಂಭಾಗದ ರಸ್ತೆಯಲ್ಲೇ ಪೂಜೆ ಸಲ್ಲಿಸಿ ನಮಸ್ಕರಿಸಿದ ಅವರು ಲಾಕ್ ಡೌನ್ ನಿಯಮ ಪಾಲಿಸಿದರು.
ಲಾಕ್ ಡೌನ್ ಹಿನ್ನಲೆಯಲ್ಲಿ ಕಳೆದ 50 ದಿನಗಳಿಂದಲೂ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ದೇವಾಲಯದ ಮುಂಭಾಗದ ಬಾಗಿಲು ಬಂದ್ ಮಾಡಲಾಗಿತ್ತು. ಆದರೂ ಮತ್ತೊಂದು ಬಾಗಿಲಿನ ಮೂಲಕ ಪ್ರತಿದಿನ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ.
![prayer to chamundeshwari](https://etvbharatimages.akamaized.net/etvbharat/prod-images/kn-mys-1-minister-stsomashekar-visit-chamundi-temple-news-7208092_16052020092629_1605f_1589601389_200.jpg)
ಮೈಸೂರು ಜಿಲ್ಲೆ ಕೊರೊನಾ ಮುಕ್ತವಾದರೆ ತಾಯಿ ಸನ್ನಿಧಿಗೆ ಬಂದು ಪೂಜೆ ಸಲ್ಲಿಸುವುದಾಗಿ ಕೋರಿಕೊಂಡಿದ್ದೆ. ಈಗ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಜಿಲ್ಲೆಯ ಜನತೆ ಕೊರೊನಾದಿಂದ ಪಾರಾಗಿದ್ದಾರೆ. 90 ಪಾಸಿಟಿವ್ ಪ್ರಕರಣದಿಂದ ಶೂನ್ಯಕ್ಕೆ ಇಳಿದಿದೆ. ಇನ್ನು ಮುಂದೆಯೂ ಆಶೀರ್ವಾದ ಹೀಗೆಯೇ ಇರಲಿ ಎಂದು ತಾಯಿ ಬಳಿ ಕೋರಿಕೊಂಡಿದ್ದಾಗಿ ಎಸ್.ಟಿ.ಸೋಮಶೇಖರ್ ಹೇಳಿದರು.
![prayer to chamundeshwari](https://etvbharatimages.akamaized.net/etvbharat/prod-images/kn-mys-01-chamundihill-vis-ka10003_16052020085323_1605f_1589599403_127.jpg)
ಜನತೆಯ ಸಹಕಾರ ಉತ್ತಮವಾಗಿತ್ತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯರು, ನರ್ಸ್ಗಳು, ಪೌರಕಾರ್ಮಿಕರ ಸೇವೆಯಿಂದ ಜಿಲ್ಲೆ ಕೊರೊನಾ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಪರವಾಗಿ ಇವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ರಾಜ್ಯದಲ್ಲಿ ದೇವಸ್ಥಾನಗಳನ್ನು ತೆರೆಯಲು ಅನುಮತಿ ಸಿಕ್ಕಿಲ್ಲ. ಹಾಗಾಗಿ ನಾವು ಜನತೆಯಂತೆ ದೇಗುಲದ ಹೊರಗೆ ನಿಂತು ತಾಯಿಗೆ ಪೂಜೆ ಸಲ್ಲಿಸಿ ಮನವಿ ಮಾಡಿದ್ದೇವೆ. ರಾಜ್ಯಾದ್ಯಂತ ದೇಗುಲ ತೆರೆಯುವ ಬಗ್ಗೆ ಸಂಪುಟದಲ್ಲೂ ಚರ್ಚೆಯಾಗಿದೆ. ಆದರೆ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸಮರ್ಥನೆ:
ರೈತರಿಗೆ ದುಪ್ಪಟ್ಟು ಬೆಲೆ ಸಿಗಬೇಕೆಂಬ ನಿಟ್ಟಿನಲ್ಲಿ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಇದರಿಂದ ರೈತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ನನ್ನ ಬೆಳೆ ನನ್ನ ಹಕ್ಕು ಎಂದು ರೈತ ಸ್ವಾಭಿಮಾನದಿಂದ ಹೇಳಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಎಲ್ಲಿ ಬೇಕಾದರೂ ರೈತ ಬೆಳೆ ಮಾರಿಕೊಳ್ಳಬಹುದು ಎಂದರು.
ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಎಪಿಎಂಸಿ ಸರ್ಕಾರದ ಹಿಡಿತದಲ್ಲೇ ಇರಲಿದೆ. ರೈತರು ಬೆಳೆದ ಬೆಳೆಗೆ ದುಪ್ಪಟ್ಟು ಬೆಲೆ ಸಿಗುವಂತಾಗಬೇಕು ಎಂಬುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಮೈಸೂರು ಮೆಗಾ ಡೈರಿ ನೇಮಕಾತಿಯ ಸಂದರ್ಶನವನ್ನು ಕೊರೊನಾ ಹಿನ್ನೆಲೆ ಮುಂದೆ ಹಾಕಿದ್ದೇವೆ. ಕೋವಿಡ್ ನಂತರ ಈಗ ಆಯ್ಕೆಯಾಗಿರುವ ಅಭ್ಯರ್ಥಿಗಳ ಸಂದರ್ಶನ ಮುಂದುವರೆಯಲಿದ್ದು, ಅದೇ ರೀತಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಯುತ್ತದೆ ಎಂದರು.
ಸೇವೇಜ್ ಫಾರಂ ಕಸ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಹಿಡಿಯಲಾಗುವುದು. ಈ ಬಗ್ಗೆ ನಗರಾಭಿವೃದ್ಧಿ ಸಚಿವರು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಫಾರಂ ಕಸ ವಿಲೇವಾರಿಯ ವಿಚಾರದಲ್ಲಿ ಸಂಸದರು ಹಾಗೂ ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.